ದಾವಣಗೆರೆ:ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಣ ರಂಗೇರಿದೆ. ನಮ್ಮ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದೆ. ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಗೆ ಭೇಟಿ ನೀಡಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹೇಗಾದರೂ ಮಾಡಿ ಮತ ಪಡೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹಣ ಹಂಚಿಕೆ ಮಾಡಿದರೂ ಕೂಡ ವಾತಾವರಣ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರ ಇದೆ. ಕಾಂಗ್ರೆಸ್ ಏನೇ ಆಮಿಷ ತೋರಿಸಿದರೂ, ಮತದಾರರು ದೇಶದ ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲಿದ್ದಾರೆ. ಎನ್ಡಿಎ ಕೂಟಕ್ಕೆ ಮತ ಕೊಡಬೇಕೆಂದು ಮತದಾರರು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೊಂದಲಗಳಿದ್ದವು. ಅವೆಲ್ಲವೂ ಈಗ ಮುಗಿದ ಅಧ್ಯಾಯ. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ವಿರುದ್ಧವೂ ಕೆಲವೊಂದು ಬೆಳವಣಿಗೆಗಳು ನಡೆದವು. 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದುಕೊಂಡಿದ್ದೆವು. ಈಗಿನ ವಾತಾವರಣ ಗಮನಿಸಿದರೆ, 3 ಲಕ್ಷ ಅಂತರದಲ್ಲಿ ಗೆಲುವು ನಿಶ್ಚಿತ. ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದ್ದಾರೆ. ಎಲ್ಲರೂ ರಾಘವೇಂದ್ರ ಅವರ ಪರವಾಗಿದೆ ಎಂದರು.