ಕರ್ನಾಟಕ

karnataka

ETV Bharat / state

ಬಿಜೆಪಿ ಸಂಸದರು ಗೆದ್ದಿರುವುದು ಕೋವಿಡ್ ಅಕ್ರಮದ ಹಣದಿಂದ: ಸಚಿವ ಪ್ರಿಯಾಂಕ್ ಖರ್ಗೆ - PRIYANK KHARGE SLAMS BJP

ಬಿಜೆಪಿ ನಾಯಕರು ಬೀದಿಯಲ್ಲಿ ಹೆಣ ಬಿದ್ದಾಗ ಹಣ ಮಾಡಿದ್ದಾರೆ. ಇದನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

PRIYANK KHARGE SLAMS BJP
ಸಚಿವ ಪ್ರಿಯಾಂಕ್ ಖರ್ಗೆ (ETV Bharat)

By ETV Bharat Karnataka Team

Published : Oct 11, 2024, 7:59 PM IST

ಬೆಂಗಳೂರು: ಬಿಜೆಪಿ ಸಂಸದರು‌ ಗೆದ್ದಿರೋದು ಕೋವಿಡ್ ಅಕ್ರಮ ಹಣದ ಮೇಲೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಕೋವಿಡ್ ಹಗರಣದ ತನಿಖೆ, ಉಪ ಸಮಿತಿ ರಚನೆ ಸಂಬಂಧ ಪ್ರತಿಕ್ರಿಯಿಸುತ್ತಾ, ಸಂಪುಟ ಸಭೆಯಲ್ಲಿ ‌ಕೋವಿಡ್ ಕುರಿತ ಕುನ್ಹಾ ಆಯೋಗದ ಮಧ್ಯಂತರ ವರದಿ ಬಗ್ಗೆ ಚರ್ಚೆ ಆಗಿದೆ. 7,223 ‌ಕೋಟಿ ರೂ ಖರ್ಚು ಮಾಡಿದ್ದಾರೆ ಎಂದು ವರದಿಯಲ್ಲಿ‌ ಸ್ಪಷ್ಟವಾಗಿ ಹೇಳಲಾಗಿದೆ. ದುಬಾರಿ ದರದ ಮೆಡಿಕಲ್ ಡಿವೈಸ್ ಖರೀದಿ, ಪಿಪಿಇ ಕಿಟ್, ವ್ಯಾಕ್ಸಿನ್ ಖರೀದಿ ಮಾಡಿದ್ದಾರೆ. ಕಳಪೆ ಮೆಡಿಸಿನ್ ಖರೀದಿಸಿ ಜನರಿಗೆ ನೀಡಿದ್ದಾರೆ. ಹೆಣದ ಮೇಲೆ ಹಣ ಮಾಡಿದವರಿಗೆ ಶಿಕ್ಷೆ ಆಗಬಾರದಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣ ಮಾಡ್ತಾರೆ ಅಂತಾರೆ. ಮುಡಾ ಕೇಸ್ ಮುಚ್ಚಿ ಹಾಕಲು ಇದೆಲ್ಲ ಮಾಡ್ತಾರೆ ಅಂತಾರೆ. ಹತ್ತು ರೂಪಾಯಿ ಬಿತ್ತು, ಯಾರೋ ಎತ್ಕೊಂಡ್ರು ಅನ್ನೋದಲ್ಲ. ಅಂದು ವಿಶ್ವದಲ್ಲಿ ಯಾರೂ ಓಡಾಡುವ ಹಾಗೆ ಇರಲಿಲ್ಲ. ಒಬ್ಬರನ್ನು ಒಬ್ಬರು ಮುಟ್ಟುವ ಹಾಗೆ ಇರಲಿಲ್ಲ. ಅಂಥ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ್ದಾರೆ. ಬೀದಿಯಲ್ಲಿ ಹೆಣ ಬಿದ್ದಾಗ ಹಣ ಮಾಡಿದ್ದಾರೆ. ಇದನ್ನು ಜನರ ಮುಂದಿಡುವ ಕೆಲಸ ಮಾಡ್ತಿದ್ದೇವೆ. ರಾಜ್ಯದ ಜನರು ಕ್ರಮ ಕೈಗೊಳ್ಳಲಿ. ಮುಂದಿನ ಬಾರಿ ಜನ ತೀರ್ಮಾನ ಮಾಡಲಿ. ಇವರಿಗೆ ನಾಚಿಕೆ ಆಗಲ್ವಾ?. ಬಿಜೆಪಿ ಸಂಸದರು‌ ಗೆದ್ದಿರೋದು ಆ ಹಣದ ಮೇಲೆ. ನಮ್ಮ ಮೇಲೆ‌ ಜವಾಬ್ದಾರಿ ಇದೆ. ಇದನ್ನು ಲಾಜಿಕಲ್ ಎಂಡ್​ಗೆ ತೆಗೆದುಕೊಂಡು ಹೋಗ್ತೇವೆ ಎಂದರು.

43 ಕ್ರಿಮಿನಲ್ ಕೇಸ್ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವು ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ. ಗಲಭೆಯಲ್ಲಿ ಇತರೆ ಆರೋಪಿಗಳು ಅಂತ ಸೇರಿಸ್ತಾರೆ. ಹೀಗಾಗಿ ಕೇಸ್ ತನಿಖೆ ಮಾಡಿ ವಾಪಸ್ ಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಸಿ.ಟಿ.ರವಿ ಪ್ರಕರಣ ವಾಪಸ್ ಪಡೆದಿದ್ದೇವೆ. ಇದು ರಾಜಕೀಯ ಅಂತ ಅವರು ಹೇಳ್ತಾರಾ?. ಅವರು ಹೇಳಲಿ, ಅವರಿಗೆ ಏನು ಶಿಕ್ಷೆ ಆಗಬೇಕು ಆಗಲಿ. ಎಲ್ಲ ಕೇಸ್ ಪರಿಶೀಲನೆ ಮಾಡಲಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದು ಬಿ ರಿಪೋರ್ಟ್ ಹಾಕುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಗಣಿಗಾರಿಕೆ ಎಸ್‌ಐಟಿ ತನಿಖೆ ಅವಧಿ ವಿಸ್ತರಣೆ ವಿಚಾರವಾಗಿ ಮಾತನಾಡಿ, ಕಾಲಮಿತಿಯಲ್ಲಿ ಪ್ರಕರಣದ ತನಿಖೆ ಆಗಬೇಕಾಗಿದೆ. ಅದಕ್ಕಾಗಿ ಸಿಎಂ‌ ಅವರಿಗೆ ಕಾನೂನು ಸಚಿವರು ಹೇಳಿದ್ದಾರೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಕಳೆದ ಹತ್ತು ವರ್ಷದಿಂದ ಅದರ ತನಿಖೆ ಆಗುತ್ತಿದೆ ಎಂದರು.

ಬಿಜೆಪಿ ಕೇಸ್ ಮರು ತನಿಖೆ ಆರನೇ ಗ್ಯಾರಂಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಿಂದಿನ ಹಗರಣಗಳು ಆಗಿಯೇ ಇಲ್ಲ ಎಂದರು. ಪಿಎಸ್‌ಐ ಕೇಸ್​ನಲ್ಲಿ ಏನು ಆಯಿತು?. ಅವರೇ ಒಪ್ಪಿಕೊಂಡರಲ್ವಾ?. ಎಡಿಜಿಪಿ ಅರೆಸ್ಟ್ ಆದರು, ರೀ-ಎಕ್ಸಾಂ ಆಯ್ತು. ಎಲ್ಲವೂ ಸರಿ ಆಗಿದ್ರೆ ಗುಡ್ ನ್ಯೂಸ್ ಸಿಕ್ತಾ ಇತ್ತು. ಪಿಎಸ್‌ಐ ಕೇಸ್​ನಲ್ಲಿ ನನಗೆ ನೋಟಿಸ್ ಕೊಟ್ಟಿದ್ರು. ಪ್ರಿಯಾಂಕ್ ಖರ್ಗೆ ಪ್ರಚಾರ ಖರ್ಗೆ ಅಂದ್ರು. ಹೀಗೆ ಗಂಗಾ ಕಲ್ಯಾಣ ಇಲಾಖೆಯಲ್ಲಿ ತನಿಖೆ ಆಯಿತು. ಇದೇ ಅಲ್ವಾ ಆರನೇ ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಿಂದ ತೆರಿಗೆ ತಾರತಮ್ಯ ವಿಚಾರವಾಗಿ ಮಾತನಾಡಿ, ತೆರಿಗೆ ಪಾವತಿಯಲ್ಲಿ 2ನೇ ಸ್ಥಾನ ನಮ್ಮದು. ತೆರಿಗೆಗೆ ಸೂಕ್ತ ಮರು ಪಾವತಿಗೆ ಕೇಳುತ್ತಿದ್ದೇವೆ. ಉತ್ತರ ಪ್ರದೇಶ 100 ರೂ. ತೆರಿಗೆ ಪಾವತಿ ಮಾಡುತ್ತೆ. ಆದರೆ, ವಾಪಸ್ ಪಡೆಯೋದು 300 ರೂ. ಮಧ್ಯಪ್ರದೇಶ 290 ರೂ. ಪಡೆಯುತ್ತೆ. ಬಿಹಾರ 100 ರೂ. ತೆರಿಗೆ ಪಾವತಿಸುತ್ತೆ. ವಾಪಸ್ ಪಡೆಯೋದು 918 ರೂ., ಆದರೆ, ರಾಜ್ಯಕ್ಕೆ‌ 13 ರೂಪಾಯಿ ಅಷ್ಟೇ ಸಿಕ್ತಿದೆ. ತೆರಿಗೆ ತಾರತಮ್ಯದಿಂದ ಅಭಿವೃದ್ಧಿಯಾಗಲ್ಲ. ಹಣಕಾಸು ಆಯೋಗಕ್ಕೂ ತಾರತಮ್ಯದ ಬಗ್ಗೆ ಹೇಳಿದ್ದೆವು ಎಂದರು.

ನಿರ್ಮಲಾ ಸೀತಾರಾಮನ್ ಮಾತನಾಡ್ತಿಲ್ಲ. ಅವರಿಗೂ ವೈಜ್ಞಾನಿಕವಾಗಿ ಮಾಡಿ ಎಂದು ಹೇಳ್ತೇವೆ. ತಮ್ಮ ವೈಯಕ್ತಿಕ ಸಿಟ್ಟು ಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ. ತೆರಿಗೆ ಬಗ್ಗೆ ನಮ್ಮ ಹೋರಾಟ ಮುಂದುವರಿಸ್ತೇವೆ. ಕನ್ನಡಿಗರ ಪರವಾಗಿ ಸಂಸದರು ಧ್ವನಿ ಎತ್ತುತ್ತಿಲ್ಲ‌. ದಕ್ಷಿಣ ಭಾರತ ಆರ್ಥಿಕ ಕೊಡುಗೆಯಲ್ಲಿ ನಾವು ಮುಂದಿದ್ದೇನೆ. ಇಂತಹ ರಾಜ್ಯಗಳ ಪೋಷಣೆ ರಾಷ್ಟ್ರಕ್ಕೆ ಲಾಭ. ರಾಜ್ಯದ ಮೇಲೆ ಕೇಂದ್ರ ದ್ವೇಷ ತೀರಿಸಿಕೊಳ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಪ್ರತ್ಯೇಕ ದಕ್ಷಿಣ ಭಾರತ ನನ್ನ ಕೂಗಲ್ಲ, ಈಗ ಮತ್ತೆ ಅನ್ಯಾಯ ಮಾಡಿ ಕೂಗು ಏಳಿಸಬೇಡಿ: ಡಿ.ಕೆ.ಸುರೇಶ್

ABOUT THE AUTHOR

...view details