ಚಿಕ್ಕೋಡಿ:ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಗಳು ಬಂದರೂ ಬಿಜೆಪಿ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭೆ ಚುನಾವಣೆ ವಿಚಾರದಲ್ಲಿ ಚಿಕ್ಕೋಡಿಯಲ್ಲಿ ಬಿಜೆಪಿ v/s ಕಾಂಗ್ರೆಸ್ ಚುನಾವಣೆ ಆಗಲಿದೆ. ಇಲ್ಲಿ ಅಭ್ಯರ್ಥಿಗಳು ಮುಖ್ಯವಲ್ಲ ಎಂದು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಶನಿವಾರ ಚಿಕ್ಕೋಡಿ ಪಟ್ಟಣದಲ್ಲಿ 40 ಲಕ್ಷ ರೂಪಾಯಿ ವೆಚ್ಚದ ಹೈಟೆಕ್ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ, ಇಲ್ಲಿ ಯಾರೇ ಅಭ್ಯರ್ಥಿಗಳು ಬಂದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಚಿಕ್ಕೋಡಿ ಲೋಕಸಭೆ ಎಂದರೆ ಅದು ಪಕ್ಷ ಪಕ್ಷಗಳ ನಡುವೆ ನಡೆಯುವಂತ ಚುನಾವಣೆ. ಇಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ನಮ್ಮ ಬಿಜೆಪಿ ವರಿಷ್ಠರು ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಎದುರಾಳಿ ಯಾರೇ ಬರಲಿ ನಮ್ಮ ಕೆಲಸ ನಾವು ಮಾಡುತ್ತೇವೆ. ಎದುರಾಳಿ ಎಷ್ಟೇ ಬಲಿಷ್ಠ ಇದ್ದರೂ ಬಿಜೆಪಿಯ ವರ್ಚಸ್ಸು ಕಡಿಮೆಯಾಗುವುದಿಲ್ಲ. ಕಳೆದ ಬಾರಿ ಒಂದು ಲಕ್ಷ ಹದಿನೆಂಟು ಸಾವಿರ ಮತಗಳ ಅಂತರದಿಂದ ನಾನು ಗೆಲುವು ಸಾಧಿಸಿದ್ದು, ಈ ಬಾರಿ ಅದಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ಜೊತೆಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ರಾಜ್ಯದಲ್ಲಿ ನಮ್ಮ ಮೊದಲಿನ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡಿದೆ. ಇದರಿಂದ ಬಿಜೆಪಿ ಪಕ್ಷದ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.