ಕಲಬುರಗಿ:ಜಿಲ್ಲೆಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದೆ. ಸಂಸದ ಉಮೇಶ ಜಾಧವ ಅವರ ಬೆಂಬಲಿಗ, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ಗಿರೀಶ್ ಚಕ್ರ (31) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಇತ್ತೀಚೆಗೆ ಫೆಬ್ರವರಿ 14ರಂದು ಗಿರೀಶ್ ಚಕ್ರ ಅವರು ಬಿಎಸ್ಎನ್ಎಲ್ ಕಲಬುರಗಿ ವಿಭಾಗದ ಟೆಲಿಫೋನ್ ಅಡ್ವೈಸರಿ ಕಮಿಟಿ ಸದಸ್ಯರನ್ನಾಗಿ ನೇಮಕ ಆಗಿದ್ದರು. ಈ ಹಿನ್ನೆಲೆಯಲ್ಲಿ ಮದ್ಯಪಾನದ ಪಾರ್ಟಿ ಹೆಸರಿನಲ್ಲಿ ಗಿರೀಶ್ ಚಕ್ರ ಅವರನ್ನು ಸಾಗನೂರು ಗ್ರಾಮದ ಜಮೀನಿಗೆ ಕರೆಸಿಕೊಳ್ಳಲಾಗಿತ್ತು. ಆದರೆ, ಸ್ನೇಹಿತರೇ ಮಧ್ಯರಾತ್ರಿ ಕಣ್ಣಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಕೊಲೆಯಾದ ಗಿರೀಶ್ ಚಕ್ರ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.