ಬೆಂಗಳೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಪರಿಷತ್ ಚುನಾವಣೆ ಹಿನ್ನೆಲೆ ಜೆ. ಪಿ. ಭವನದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರ ಸಮನ್ವಯ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಯಾವ ಬ್ರ್ಯಾಂಡ್ ಬೆಂಗಳೂರು ಮಾಡಿರೋದು ಇವರು?. ಅದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಎರಡು ಮೂರು ಮಳೆಗೆ ಬೆಂಗಳೂರಿನಲ್ಲಿ ಮನೆಗಳಿಗೆ ನೀರು ತುಂಬಿಕೊಂಡಿದೆ. ಬಿಡಿಎನಲ್ಲಿ ಮೊನ್ನೆ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರಂತೆ. ಬಹಳ ರಹಸ್ಯವಾಗಿ ಸಭೆ ಮಾಡಿದ್ದಾರಂತೆ. ಬೆಂಗಳೂರಿಗೆ ಇವರ ಕೊಡುಗೆ ಏನು?. ಈ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಒಂದೂ ಹೊಸ ಅಭಿವೃದ್ಧಿ ಆಗಿಲ್ಲ. ಯಾವ ಬ್ರ್ಯಾಂಡ್ ಬೆಂಗಳೂರು ಮಾಡಿರೋದು ಇವರು? ಎಂದು ವಾಗ್ದಾಳಿ ನಡೆಸಿದರು.
ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಬೇಕು. ಕಾಂಗ್ರೆಸ್ ಹಣದ ಹೊಳೆಯೇ ಹರಿಸುತ್ತಿದೆ. ಅ.ದೇವೇಗೌಡರಿಗೆ ಅಷ್ಟೊಂದು ಹಣ ಹರಿಸುವ ಸಾಮರ್ಥ್ಯ ಇಲ್ಲ. ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ವಿಶ್ವಾಸ ಗಳಿಸುವ ಕೆಲಸ ಮಾಡಿಸಬೇಕು. ಮೈಮರೆಯದೇ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ನವರು ಏನು ಬೇಕಾದರು ಆಮಿಷವೊಡ್ಡಲಿ. ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಫಲಿತಾಂಶ ತರುವಲ್ಲಿ ನೀವು ಯಶ ಕಂಡಿದ್ದೀರ ಎಂಬುದನ್ನು ನೋಡುತ್ತಿದ್ದೇನೆ. ರಾಜ್ಯದಲ್ಲಿ ಒಂದೇ ಒಂದು ಹೊಸ ಕೆಲಸ ಆಗಿಲ್ಲ. ಕಳೆದ ಮೂರು ತಿಂಗಳಲ್ಲಿ 175 ರೂ. ಅನ್ನಭಾಗ್ಯ ನಗದು ಸಂದಾಯವಾಗಿಲ್ಲ. ಬಿತ್ತನೆ ಬೀಜ ಬೆಲೆ ಶೇ.70ರಷ್ಟು ಹೆಚ್ಚಾಗಿದೆ. ಗೊಬ್ಬರ ಸಿಗುತ್ತಿಲ್ಲ. ಈ ಸರ್ಕಾರ ಒಪಿಎಸ್ ಜಾರಿ ಮಾಡುತ್ತೇವೆ ಎಂದು ಮತ ಪಡೆದರು. ಒಂದು ವರ್ಷ ಆದರೂ ಜಾರಿ ಮಾಡಿಲ್ಲ. ಈಗ ಸಮಿತಿ ರಚನೆ ಮಾಡುತ್ತಾರಂತೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಸಾಲ ಮಾಡಿ ಅಧಿಕಾರ ನಡೆಸ್ತಿದ್ದಾರೆ:ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಿದ್ದರಾಮಯ್ಯ ಸಾಲಗಾರ ಆಗಿದ್ದಾರೆ. ಲಕ್ಷಾಂತರ ಕೋಟಿ ಸಾಲ ಮಾಡಿದ್ದಾರೆ. ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಮಾರಲು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಕಂಡವರ ಮನೆ ಮುಂದೆ ಹೋಗಿ ಸಾಲ ಮಾಡುತ್ತಿದ್ದಾರೆ. ಇಲ್ಲಿ ದುಡ್ಡು ಹೊಡೆದು ದಿಲ್ಲಿಗೆ ಕಳುಹಿಸುತ್ತಿದ್ದಾರೆ. ಎಲ್ಲಾ ಕಾಂಗ್ರೆಸ್ ಮನೆಯವರಲ್ಲಿ ದುಡ್ಡು ಸಿಗುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರ ಮನೆಯಲ್ಲಿ ಎಷ್ಟು ದುಡ್ಡು ಇರಬಹುದು?. ನಮ್ಮ ಜಿಡಿಪಿ ಮೈನಸ್ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆ ವೇಳೆ ಹಾಲು ಜೇನು ರೀತಿಯಲ್ಲಿ ಸಮನ್ವಯತೆಯಿಂದ ಕೆಲಸ ಮಾಡಿದ್ದೇವೆ. ನಾಯಕರೇ ಖುದ್ದು ಹೇಳಲೇ ಬೇಕು ಎಂದು ಕಾಯದೇ ಸಮನ್ವಯತೆ ಸಾಧಿಸಿ ಕೆಲಸ ಮಾಡಿದ್ದೀರಿ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಒಟ್ಟಾಗಿ ಕೆಲಸ ಮಾಡಿದ್ದಾರೆ. ಪಾಪಿಗಳ ಸರ್ಕಾರ ಮಾಡಿ ನಾನು ಕ್ಲರ್ಕ್ ಆಗಿ ಕೆಲಸ ಮಾಡಿದ್ದೆ ಎಂದು ಕುಮಾರಸ್ವಾಮಿ ಅವರೇ ಹಲವು ಬಾರಿ ಹೇಳಿದ್ದಾರೆ. ಬಿಜೆಪಿ ಜೊತೆ ಮೈತ್ರಿಯಲ್ಲಿ ಸಿಎಂ ಆಗಿದ್ದಾಗ ಕುಮಾರಣ್ಣಗೆ ಹೆಸರು ತಂದು ಕೊಟ್ಟಿತ್ತು. ಕಾಂಗ್ರೆಸ್ ಜೊತೆ ಅವತ್ತು ಕೈ ಎತ್ತಿ ಜೋಡೆತ್ತು ಎಂದ್ರು. ಕೆಲಸ ಆಗ ಬೇಕಾದರೆ ಕೈ ಎತ್ತು. ಕೆಲಸ ಆದ ಮೇಲೆ ಚೂರಿ ಹಾಕು. ಅದು ಕಾಂಗ್ರೆಸ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.