ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರ ಬಳಸಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ - CM Allegations - CM ALLEGATIONS

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಸಭಾಂಗಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಬಳಸಿ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

CM ALLEGATIONS
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : Oct 2, 2024, 5:47 PM IST

ಬೆಂಗಳೂರು:ನಮ್ಮ‌ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದೇ ಅತ್ಯುನ್ನತ ನ್ಯಾಯಾಲಯ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಸೂಚ್ಯವಾಗಿ ತಿಳಿಸಿದರು. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಗಾಂಧಿ ಭಾರತ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ, ನಮ್ಮ‌ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದೇ ಅತ್ಯುನ್ನತ ನ್ಯಾಯಾಲಯ ಆಗಿದೆ ಎಂದು ಮಹತ್ಮಾಗಾಂಧಿ ಉಲ್ಲೇಖವನ್ನು ಪ್ರಸ್ತಾಪಿಸಿದರು.

ಇದನ್ನು ಅರ್ಥ ಮಾಡಿಕೊಳ್ಳಬೇಕು.‌ ನಮ್ಮ ಮೇಲೆ ಗೂಬೆ ಕೂರಿಸುತ್ತಿರುವವರು ಬಿಜೆಪಿ. ತೇಜೋವಧೆ ಮಾಡುತ್ತಿರುವವರು ಬಿಜೆಪಿ. ಅವರ ಜೊತೆಗೆ ಜೆಡಿಎಸ್ ಸೇರಿಕೊಂಡಿದೆ. ಅವರಿಗೆ ಹೊಟ್ಟೆ ಉರಿ. ಸಹಿಸುವುದಕ್ಕೆ ಆಗುತ್ತಿಲ್ಲ. ಸರ್ಕಾರವನ್ನು ಅಸ್ತಿರಗೊಳಿಸಲು ಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರವನ್ನು ಬಳಸಿ ಸರ್ಕಾರ ಅಸ್ಥಿರ ಗೊಳಿಸಲು ಯತ್ನಿಸುತ್ತಿದ್ದಾರೆ. ಈ ಷಡ್ಯಂತರ ಸೋಲಿಸಲು ಎಲ್ಲ ರೀತಿ ನಾವು ತಯಾರಾಗಬೇಕು. ನಮ್ಮ‌ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದೇ ಅತ್ಯುನ್ನತ ನ್ಯಾಯಾಲಯ ಆಗಿದೆ ಎಂದು ತಿಳಿಸಿದರು.

ಬಿಜೆಪಿ ಅವರಿಗೆ ಗೋಡ್ಸೆ ನಾಯಕ. ಗಾಂಧಿ ಅವರಿಗೆ ಕಳ ನಾಯಕ. ಅವರು ಈ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಹೊರಟಿದ್ದಾರೆ. ಈ ಷಡ್ಯಂತ್ರ ಸೋಲಿಸುವ ಯತ್ನವನ್ನು ನಮ್ಮ ಎಲ್ಲ ಕಾರ್ಯಕರ್ತರು ಮಾಡಬೇಕು. ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಕೊಡುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ಅಲ್ಲ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವಂಥವರು, ಬಡವರಿಗೆ ವಿರುದ್ಧವಾಗಿರುವಂಥವರು ಎಂದು ಸಿಎಂ ವಾಗ್ದಾಳಿ ನಡೆಸಿದರು.

ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿ:ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿ ಎಂದು ಕರೆ ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ್ದಾರೆ. ಇದು ನಮಗೆಲ್ಲಾ ಹೆಮ್ಮೆ. ನಾನು ಅಧಿಕಾರ ತಗೆದುಕೊಂಡಾಗ ಹಲವು ಅಡಚಣೆ ಇತ್ತು. ಕೋವಿಡ್ ಟೈಮ್​ನಲ್ಲಿ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿದ್ದಾರೆ. 2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು. ಇವತ್ತಿನಿಂದ ಮತ್ತೆ ಹುಮ್ಮಸ್ಸು ಉತ್ಸಾಹದಿಂದ ಕೆಲಸ ಮಾಡಿ ಎಂದರು.

ಇಂದು ಗಾಂಧಿ ನಡಿಗೆ ಮೂಲಕ ಹೆಜ್ಜೆ ಇಟ್ಟಿದ್ದೇವೆ. ಹಿಂದೆ ದೇಶಪಾಂಡೆ ಅವರು ಅಧ್ಯಕ್ಷರಾಗಿದ್ದಾಗ ದಂಡಿ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅದರ ನೆನಪಿನ ಆಧಾರದ ಮೇಲೆ ಇಂದು ಪಕ್ಷ ಹಾಗೂ ಸರ್ಕಾರದ ವತಿಯಿಂದ ಈ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. 200 ವರ್ಷದ ಹಿಂದೆ ಬ್ರಿಟೀಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಕಿತ್ತೂರಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲು ಆ ಜಿಲ್ಲೆಯ ನಾಯಕರು ನಿರ್ಧರಿಸಿದ್ದು, ಅದಕ್ಕೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಇಂದು ಚಾಲನೆ ಮಾಡಿದ್ದಾರೆ ಎಂದರು.

ಗಾಂಧಿ ಜ್ಯೋತಿ ಪಾದಯಾತ್ರೆ: ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ‘ಗಾಂಧಿ ಜ್ಯೋತಿ ಪಾದಯಾತ್ರೆ’ ಮೂಲಕ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆಯಿಂದ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದವರೆಗೆ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ತೆರಳಿದರು. ಭಾರತ ಜೋಡೋ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಜೂಮ್ ಮೂಲಕ ಸಂಪರ್ಕ ಸಾಧಿಸಲಾಗಿತ್ತು. ಆಮೂಲಕ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಒಟ್ಟಿಗೆ ಗಾಂಧಿ ಜಯಂತಿ ಕಾರ್ಯಕ್ರಮ ಆಚರಿಸಿತು.

ಇದನ್ನೂ ಓದಿ:ಬೆಂಗಳೂರಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರಿಂದ 'ಗಾಂಧಿ ನಡಿಗೆ' - Gandhi Nadige

ABOUT THE AUTHOR

...view details