ಕರ್ನಾಟಕ

karnataka

ETV Bharat / state

ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆ, ಕೆಲವೇ ದಿನಗಳಲ್ಲಿ ಗೊಂದಲಗಳಿಗೆ ಪರಿಹಾರ: ಅಶೋಕ್ - BJP INTERNAL TUSSLE

ಪಕ್ಷದಲ್ಲಿನ ಆಂತರಿಕ ಕಿತ್ತಾಟದಿಂದ ಸ್ವಲ್ಪ ಅಡ್ಡಿಯಾಗಿದೆ. ಕೆಲ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

BJP INTERNAL TUSSLE, ಬಿಜೆಪಿ ಆಂತರಿಕ ಕಿತ್ತಾಟ, ಆರ್ ಅಶೋಕ್
ಪ್ರತಿಪಕ್ಷ ನಾಯಕ ಆರ್.ಅಶೋಕ್ (ETV Bharat)

By ETV Bharat Karnataka Team

Published : Feb 7, 2025, 4:50 PM IST

ಬೆಂಗಳೂರು:ಬಿಜೆಪಿಯಲ್ಲಿ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು, 15-20 ದಿನಗಳಲ್ಲಿ ಎಲ್ಲಾ ಗೊಂದಲಗಳಿಗೂ ಪರಿಹಾರ ಸಿಗಲಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ನೇತೃತ್ವದಲ್ಲಿ ನಡೆದ ಬಿಜೆಪಿ ನಾಯಕರ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ತಮ್ಮ ದೂರುಗಳು ಏನಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಹೇಳಿಕೊಳ್ಳಬೇಕು. ಹೈಕಮಾಂಡ್ ಇದೇ ಹೇಳಿದೆ. ನಮ್ಮ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಅವರೂ ಸಹ ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.

ಪಕ್ಷದ ವಿಚಾರಗಳನ್ನು ಯಾರೂ ಬಹಿರಂಗವಾಗಿ ಮಾತನಾಡಬಾರದೆಂದು ಸಹ ಸುಧಾಕರ್ ರೆಡ್ಡಿಯವರು ಎಲ್ಲರಿಗೂ ಸ್ಪಷ್ಟವಾದ ಸೂಚನೆ ನೀಡಿದ್ದಾರೆ. ಇದು ತನ್ನ ಮತ್ತು ಕೇಂದ್ರದ ವರಿಷ್ಠರ ಅನಿಸಿಕೆಯೂ ಆಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಪ್ರತಿದಿನ ಅಕ್ರಮದಲ್ಲಿ ತೊಡಗಿದೆ. ಭ್ರಷ್ಟಾಚಾರ, ಲೂಟಿ, ಕಮಿಷನ್, ಬಾಣಂತಿಯರ ಸಾವು, ಮೈಕ್ರೋ ಫೈನಾನ್ಸ್​ನಿಂದ ಸಾವು, ಮುಡಾ, ವಾಲ್ಮೀಕಿ ಹಗರಣ ಸೇರಿ ಹಲವು ವಿಚಾರಗಳಿವೆ. ಇವೆಲ್ಲದರ ವಿರುದ್ಧ ನಾವು ಹೋರಾಟ ಮಾಡಬೇಕು. ನಮ್ಮ ಆಂತರಿಕ ಕಿತ್ತಾಟದಿಂದ ಸ್ವಲ್ಪ ಅಡ್ಡಿಯಾಗಿದೆ. ಬಿಜೆಪಿಯಲ್ಲಿ ಇಂಥ ವಿದ್ಯಮಾನ ನಡೆಯಬಾರದಿತ್ತು. ಕೆಲ ದಿನಗಳಲ್ಲೇ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದರು.

ಮುಡಾ ಪ್ರಕರಣದ ತೀರ್ಪು ಸ್ವಾಗತಿಸುತ್ತೇವೆ-ಅಶೋಕ್: ಮುಡಾ ಹಗರಣದ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲು ಹೈಕೋರ್ಟ್ ನಿರಾಕರಿಸಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಮುಡಾ ಅಕ್ರಮದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ್ ತಿಳಿಸಿದರು.

ಮುಡಾ ಕೇಸ್ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕೆಂಬ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈಗಾಗಲೇ ಲೋಕಾಯುಕ್ತ, ಇಡಿ ತನಿಖೆ ನಡೆಸುತ್ತಿದೆ. ಸದ್ಯ ಹೈಕೋರ್ಟ್ ಕೊಟ್ಟಿರುವ ತೀರ್ಪು ಸಿಎಂ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಆದರೆ, ಮುಡಾ ಹೆಸರಿನಲ್ಲಿ ಲೂಟಿ ಆಗಿರುವುದು ರಾಜ್ಯದ ಖಜಾನೆಗೆ ವಾಪಸ್ ಬರುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಕಾನೂನಿನ ಮೇಲೆ ನಮಗೆ ಗೌರವ ಇದೆ. ಮುಡಾ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ನಾವು ಹೋರಾಟ ಮಾಡಿದ್ದೆವು. ಮತ್ತೆ ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಅದನ್ನು ಮುಂದುವರೆಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ಈ ಕೇಸ್‌ನಲ್ಲಿ ಯಡಿಯೂರಪ್ಪನವರಿಗೆ ಕೋರ್ಟ್ ರಿಲೀಫ್ ಕೊಟ್ಟಿದೆ. ತೀರ್ಪು ಸಮಾಧಾನ ತಂದಿದೆ. ಮುಂದಿನ ತನಿಖೆ ಯಾವ ರೀತಿ ನಡೆಯಬೇಕೋ ಅದು ನಡೆಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಹೈಕಮಾಂಡ್ ಭೇಟಿಗೆ ಸಿಗದ ಅವಕಾಶ: ದೆಹಲಿಯಿಂದ ಯತ್ನಾಳ್ ಟೀಂ ವಾಪಸ್, ಮುಂದಿನ ನಡೆ ಏನು?

ಇದನ್ನೂ ಓದಿ: ಸಿದ್ದರಾಮಯ್ಯರನ್ನು ಹೈಕೋರ್ಟ್ ಆರೋಪಮುಕ್ತ ಮಾಡಿಲ್ಲ, ನಮ್ಮ ಆರೋಪಕ್ಕೆ ನಾವು ಬದ್ಧ: ಬಿ.ವೈ.ವಿಜಯೇಂದ್ರ

ABOUT THE AUTHOR

...view details