ಬೆಂಗಳೂರು:''ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ನಾವೆಲ್ಲಾ ಪದಾಧಿಕಾರಿಗಳು ಒಂದು ಕ್ಷಣವೂ ವಿರಮಿಸದೆ ಕೆಲಸ ಮಾಡಲಿದ್ದೇವೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆದ್ದು ಮೋದಿಗೆ ಉಡುಗೊರೆ ಕೊಡಬೇಕಿದೆ. ನಮ್ಮ ಎದುರಾಳಿಗಳನ್ನು ಹಗುರವಾಗಿ ತೆಗೆದುಕೊಳ್ಳದೆ ನಮ್ಮ ಸಾಧನೆ ಜನರ ಮುಂದಿಟ್ಟು ಚುನಾವಣೆ ಎದುರಿಸೋಣ'' ಎಂದು ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.
ಬಿಜೆಪಿ ನಾಯಕರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು ರಾಜ್ಯ ಬಿಜೆಪಿಯ 2024 ರ ಹಾಗೂ ವಿಜಯೇಂದ್ರ ರಾಜ್ಯ ಅಧ್ಯಕ್ಷರಾದ ನಂತರ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ನಗರದ ಅರಮನೆ ಮೈದಾನದಲ್ಲಿ ನಡೆಯಿತು. ಶ್ರೀರಾಮನಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಶ್ರೀರಾಮನ ಪರವಾದ ಘೋಷಣೆ ಮೊಳಗಿತು. ನಂತರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು. ಈ ವೇಳೆ ಮೋದಿ ಸಾಧನೆ ಕುರಿತು ಕೃತಿ ಬಿಡುಗಡೆ ಮಾಡಲಾಯಿತು.
ಆರಂಭದಲ್ಲಿ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ಭಾರತೀಯರ ಐದು ಶತಮಾನಗಳ ಕನಸು ನನಸಾಗಿದೆ. ಮೋದಿ ಸಾಮರ್ಥ್ಯದಲ್ಲಿ ಇದಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎನ್ನುವುದು ಕೂಡ ಹೆಮ್ಮೆ. 10 ವರ್ಷದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಈ ಚುನಾವಣೆ ನಮಗೆ ಸತ್ವ ಪರೀಕ್ಷೆಯಾಗಿದೆ. ಕಳೆದ ಬಾರಿ 25 ಸ್ಥಾನ ಗೆಲ್ಲುವ ಆಶ್ವಾಸನೆ ಮೋದಿ ಅವರಿಗೆ ನೀಡಿದ್ದೆವು. ಆದರೆ, 26 ಸ್ಥಾನದ ಕೊಡುಗೆ ಕೊಟ್ಟೆವು. ಈ ಬಾರಿ 28 ಸ್ಥಾನದ ಕೊಡುಗೆ ನೀಡಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಪಡೋಣ'' ಎಂದು ಕರೆ ನೀಡಿದರು.
ಶ್ರೀರಾಮನಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ''ಜಗದೀಶ್ ಶೆಟ್ಟರ್ ವಾಪಸ್ ಪಕ್ಷಕ್ಕೆ ಬಂದಿದ್ದು ನಮಗೆ ಶಕ್ತಿ ತಂದಿದೆ. ನಮ್ಮ ಮುಂದಿನ ಸವಾಲು ದೊಡ್ಡದಿದೆ. ಕಾಂಗ್ರೆಸ್ನವರು ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ. ಅಭಿವೃದ್ಧಿ ಕೆಲಸ ಮಾಡದೇ ಜನರ ದಿಕ್ಕುತಪ್ಪಿಸಿ ಮತ ಗಳಿಸಲು ಯತ್ನಿಸುತ್ತಿದ್ದಾರೆ. ಜನರ ಪರ ರಾಜ್ಯದ ಪರ ನಿಂತು ಹೋರಾಡೋಣ. ಮೋದಿ ಸಾಧನೆ ಜನರಿಗೆ ಮನವರಿಕೆ ಮಾಡಿಕೊಡೋಣ. ಈ ಕ್ಷಣದಿಂದಲೇ ವಿರಮಿಸದೆ ಕನಿಷ್ಠ 100 ದಿನ ಸಮಯ ಕೊಡೋಣ. ಭಾರತ ರಕ್ಷಿಸುವ, ಭಾರತವನ್ನು ಗೆಲ್ಲಿಸುವ ಚುನಾವಣೆ ಇದು ಎಂದು ಹೋರಾಟ ಮಾಡೋಣ. ಜಗತ್ತಿನ ನಂಬರ್ ಒನ್ ರಾಷ್ಟ್ರ ಮಾಡಲು ಮೋದಿ ಗೆಲ್ಲಿಸೋಣ'' ಎಂದು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ''ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ದೇಶದ ನೇತೃತ್ವ ತೆಗೆದುಕೊಂಡ ನಂತರ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಉತ್ತಮ ಆಡಳಿತ ನೀಡುವ ಜೊತೆಗೆ ದೇಶವನ್ನು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ ಬಿಜೆಪಿಯಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳೆಲ್ಲವನ್ನು ಈಡೇರಿಸುವ ಕೆಲಸ ಮಾಡಲಾಗುತ್ತಿದೆ. ಕಾಶ್ಮೀರಕ್ಕಿದ್ದ ಸಂವಿಧಾನದ 370 ವಿಧಿ ರದ್ದತಿ ಮಾಡಲಾಗಿದೆ'' ಎಂದು ಕೇಂದ್ರದ ಸಾಧನೆಗಳನ್ನು ಸಮರ್ಥಿಸಿಕೊಂಡರು.
''ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಆಹ್ವಾನ ಬಂದಿಲ್ಲ ಎಂದು ರಾಜ್ಯದ ನಾಯಕರು ಬೊಬ್ಬೆ ಹೊಡೆದರೆ ಕೇಂದ್ರದ ಕಾಂಗ್ರೆಸ್ ನಾಯಕರು ಆಹ್ವಾನ ಇದ್ದರೂ ಹೋಗದಿರುವ ನಿರ್ಧಾರ ಮಾಡಿದರು. ರಾಮಮಂದಿರ ಉದ್ಘಾಟನೆ ಸಂಭ್ರಮದ ನಡುವೆ ರಾಜ್ಯದಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಿ ಜೈಲಿಗೆ ಕಳಿಸಿದರು. ಹಿಂದೂ ಕಾರ್ಯಕರ್ತರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬರಗಾಲ ಬಂದಿದ್ದು, ರೈತರ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದರೂ ಸರ್ಕಾರ ರೈತರ ನೆರವಿಗೆ ಬಂದಿಲ್ಲ. ಹೊಲಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ ಶುಲ್ಕ ನಿಗದಿಪಡಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಎಸ್ಸಿಪಿ ಟಿಎಸ್ಪಿ ಹಣ ಬೇರೆಡೆ ವರ್ಗಾವಣೆ ಮಾಡಿ ಎಸ್ಸಿ ಎಸ್ಟಿಗಳಿಗೆ ಅನ್ಯಾಯ ಮಾಡಿದೆ. ರೈತರ, ದಲಿತರ ವಿರೋಧಿ ಸರ್ಕಾರ ಇದು, ಅರೆಬರೆ ಬೆಂದ ಗ್ಯಾರಂಟಿಗಳನ್ನು ಇಟ್ಟುಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದಾರೆ'' ಎಂದು ಟೀಕಿಸಿದರು.
''ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ನಿರೀಕ್ಷೆ ದೇಶದ ಜನತೆಯಲ್ಲಿದೆ. ಜಗತ್ತೇ ಮೋದಿ ನಾಯಕತ್ವ ಭಾರತಕ್ಕೆ ಬೇಕು ಎಂದು ಬಯಸಿದೆ. ಹಾಗಾಗಿ ಮೋದಿ ಕಾರ್ಯಕ್ರಮ ಮನೆ ಮನೆಗೆ ತಲುಪಿಸಿ ರಾಜ್ಯ ಸರ್ಕಾರ ಜನರಿಗೆ ಯಾವ ರೀತಿ ಅನ್ಯಾಯ ಮಾಡುತ್ತಿದೆ ಎನ್ನುವುದನ್ನು ತಿಳಿಸಬೇಕಿದೆ. ನಮ್ಮ ಮುಂದಿರುವ ಗುರಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ವಿಶ್ರಾಂತಿ ಪಡೆಯದೇ ಕೆಲಸ ಮಾಡುವುದು'' ಎಂದು ಕರೆ ನೀಡಿದರು.
ಇದನ್ನೂ ಓದಿ:ಹೊಂದಾಣಿಕೆ ಆಗುವುದಾದರೆ ನನ್ನ ಮೊದಲ ಆದ್ಯತೆ ಬಿಜೆಪಿಗೆ: ಗಾಲಿ ಜನಾರ್ದನ ರೆಡ್ಡಿ