ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಟ್ಲರ್, ಮುಸೋಲಿನಿ ಎಂದು ಟೀಕಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.
ಶೇಷಾದ್ರಿಪುರ ರಸ್ತೆಯಲ್ಲಿರುವ ಚುನಾವಣಾ ಆಯೋಗಕ್ಕೆ ಇಂದು ಸಂಜೆ ಶಾಸಕ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ರಾಜ್ಯ ವಕ್ತಾರರಾದ ಹೆಚ್.ಎನ್. ಚಂದ್ರಶೇಖರ್, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ನೇತೃತ್ವದ ನಿಯೋಗ ದೂರು ನೀಡಿದೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ರಾಜ್ಯ ಸರ್ಕಾರದ ನೇತೃತ್ವ ವಹಿಸಿರುವವರಿಗೆ ಯಾವುದೇ ನೀತಿ ಇಲ್ಲ. ಇವಾಗ ಚುನಾವಣೆ ನೀತಿ ಸಂಹಿತೆ ಅಂತೂ ಉಲ್ಲಂಘಿಸಿದ್ದಾರೆ. ಕೊಳ್ಳೆಗಾಲದಲ್ಲಿ ಸಿದ್ದರಾಮಯ್ಯ ಪ್ರಧಾನಿ ಅವರನ್ನು ಹಿಟ್ಲರ್ ಎಂದು ಕರೆದಿದ್ದಾರೆ. ಇದೊಂದು ಅವಹೇಳನಕಾರಿ ಪದ, ಇದನ್ನು ಅವರು ಮಾತನಾಡಬಾರದು. ಬಿಜೆಪಿ 400 ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸೋಲಿನ ಹತಾಶೆ ಕಾಡುತ್ತಿದೆ. ಹಾಗಾಗಿ ಸಂವಿಧಾನ ಅಪಾಯದಲ್ಲಿ ಇದೆ ಎಂದಿದ್ದಾರೆ ಎಂದು ಟೀಕಿಸಿದರು.
ನಿಜವಾಗಿಯೂ ಚಾಮರಾಜನಗರ ಜನರು, ರಾಜ್ಯದ ಜನರು ಸಿದ್ದರಾಮಯ್ಯ ಮಾತನ್ನು ತಿರಸ್ಕಾರ ಮಾಡ್ತಾರೆ. ಸದ್ಯ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ಕೊಟ್ಟಿದ್ದೇವೆ. ತಕ್ಷಣವೇ ಸ್ಟಾರ್ ಕ್ಯಾಂಪೇನ್ ರಿಂದ ಸಿದ್ದರಾಮಯ್ಯರ ಹೆಸರು ಕೈ ಬಿಡಬೇಕು ಎಂದಿದ್ದೇವೆ. ಅವರು ಕಾನೂನು ರೀತಿಯಲ್ಲಿ ಕ್ರಮ ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:10 ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಹಿತ ಬಯಸಿಲ್ಲ: ಕೆಪಿಸಿಸಿ ವಕ್ತಾರ ಡಿ ಬಸವರಾಜ್ - D Basavaraj