ಬೆಂಗಳೂರು: ಜೂನ್ 3 ರಂದು ನಡೆಯಲಿರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣಾ ಕಣ ರಂಗೇರಿದ್ದು, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವೈ. ಎ. ನಾರಾಯಣಸ್ವಾಮಿ ಮತ್ತು ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅ. ದೇವೇಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಲೋಕಸಭಾ ಚುನಾವಣೆಯಂತೆ ಪರಿಷತ್ ಕದನದಲ್ಲೂ ಮಿತ್ರಪಕ್ಷಗಳಾದ ಬಿಜೆಪಿ - ಜೆಡಿಎಸ್ ಮೈತ್ರಿ ಮುಂದುವರೆಸಿದ್ದು ಉಭಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಶಾಂತಿನಗರದ ಟಿಟಿಎಂಸಿಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿಗಳಾದ ವೈ.ಎ ನಾರಾಯಣಸ್ವಾಮಿ ಹಾಗೂ ಅ. ದೇವೇಗೌಡ ಆಗಮಿಸಿದರು. ನಂತರ ಚುನಾವಣಾ ಆಯೋಗದ ನಿಯಮಾವಳಿಗಳಂತೆ ಅಭ್ಯರ್ಥಿ ಸೇರಿ ಐವರು ನಾಯಕರು ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಉಪಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಸೇರಿ ಯಾರೇ ಪ್ರಚಾರ ಮಾಡಿದರೂ ಕಾಂಗ್ರೆಸ್ಗೆ ಇಲ್ಲಿ ಉಳಿಗಾಲ ಇಲ್ಲ. ವೈ. ಎ. ನಾರಾಯಣಸ್ವಾಮಿ ಮತ್ತು ಅ. ದೇವೇಗೌಡರ ಗೆಲುವು ನಿಶ್ಚಿತ. ವೈ.ಎ. ನಾರಾಯಣಸ್ವಾಮಿ ಅವರು ಮಾಡಿರುವ ಕೆಲಸ, ಅವರ ಸಂಪರ್ಕ, ನಿರಂತರ ಸೇವೆ ಗಮನಿಸಿ ಅವರಿಗೆ ಶಿಕ್ಷಕರ ಆಶೀರ್ವಾದ ಖಚಿತ. ಬೆಂಗಳೂರಿನಲ್ಲಿ ಅ. ದೇವೇಗೌಡರ ಬಗ್ಗೆ ಮತದಾರರು ಉತ್ತಮ ಒಲವನ್ನು ಹೊಂದಿದ್ದಾರೆ. ಜೆಡಿಎಸ್- ಬಿಜೆಪಿ ಕಾಂಬಿನೇಷನ್ ನಿಂದಾಗಿ ಎರಡೂ ಕ್ಷೇತ್ರದಲ್ಲಿ ಹೆಚ್ಚಿನ ಮತದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಾರಿ ನಮ್ಮ ಜೊತೆ ಜೆಡಿಎಸ್ ಹೊಂದಾಣಿಕೆ ಇದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೆವು. ಈ ಚುನಾವಣೆಯನ್ನೂ ಒಗ್ಗಟ್ಟಾಗಿ ಎದುರಿಸಿ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ. ನಮ್ಮ ಪಕ್ಷದ ಎಲ್ಲ ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಸಮ್ಮುಖದಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಪರಿಷತ್‍ನಲ್ಲಿ ಅಪಾರ ಅನುಭವ ಇರುವ ನಮ್ಮ ಇಬ್ಬರು ಅಭ್ಯರ್ಥಿಗಳು ಮತ್ತೊಮ್ಮೆ ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗಿ ಬರಲಿದ್ದಾರೆ ಎಂದು ಹೇಳಿದರು.
ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಮಾತನಾಡಿ, ಮೂರು ಬಾರಿ ಆಯ್ಕೆ ಆಗಿದ್ದ ವೈ. ಎ. ನಾರಾಯಣಸ್ವಾಮಿ ನಾಲ್ಕನೇ ಬಾರಿ ಆಯ್ಕೆಗೆ ಹಾಗೂ ಅ.ದೇವೇಗೌಡ ಎರಡನೇ ಬಾರಿ ಆಯ್ಕೆಯಾಗಲು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜೂನ್ 3 ರ ಚುನಾವಣೆಯಲ್ಲಿ ದೊಡ್ಡ ಬಹುಮತದಿಂದ ಇವರಿಬ್ಬರೂ ಗೆಲ್ಲಲಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳು ಕೈಹಿಡಿಯಲಿವೆ, ಮಿತ್ರಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ, ದೊಡ್ಡ ಅಂತರದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.