ಬೆಳಗಾವಿ : ಎಲ್ಲ ವಿಚಾರಗಳನ್ನು ಸಮಾಜಕ್ಕೆ, ಸಮುದಾಯಕ್ಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನೋದು ನನಗೆ ತಿಳಿಯುತ್ತಿಲ್ಲ. ಲಿಂಗಾಯತ ಸಮಾಜಕ್ಕೆ, ಸಂಜಯ್ ಪಾಟೀಲ್ ಹೇಳಿಕೆಗೂ ಏನು ಸಂಬಂಧ? ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಸಂಜಯ್ ಪಾಟೀಲ್ ಹೇಳಿಕೆ ಲಿಂಗಾಯತ ಸಮಾಜಕ್ಕೆ ಮಾಡಿದ ಅನ್ಯಾಯ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಉತ್ತರಿಸಿದ ಅವರು, ಹೇಳಿಕೆ ತಪ್ಪಾಗಿದ್ದರೆ ತಪ್ಪು ಎಂದು ಹೇಳೋಣ. ಸಮುದಾಯಕ್ಕೆ ಹೋಗಿ ಮುಟ್ಟಿಸುವುದು ಸರಿಯಲ್ಲ ಎಂದರು.
ನರೇಂದ್ರ ಮೋದಿ ಬಗ್ಗೆ, ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್ನವರು ಕೀಳಾಗಿ ಮಾತನಾಡಿದ್ದಾರೆ. ಏಕವಚನದಲ್ಲಿ ಸಾಕಷ್ಟು ಸಲ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್ನವರು ಮಾತನಾಡಿದ್ದು ಇದೆ. ಹೀಗಾಗಿ ಸ್ವತಃ ಸಂಜಯ್ ಪಾಟೀಲ್ ಅವರೇ ಹೆಬ್ಬಾಳ್ಕರ್ಗೆ ನೀಡಿರುವ ಹೇಳಿಕೆಯ ಬಗ್ಗೆ ಉತ್ತರ ನೀಡುತ್ತಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಸಂಜಯ್ ಪಾಟೀಲ್ ಆಡಿರುವ ಮಾತುಗಳು ಬಿಜೆಪಿ ಅಜೆಂಡಾ ಅಲ್ಲವೇ ಅಲ್ಲ. ಸಂಜಯ್ ಪಾಟೀಲ್ ಜೊತೆಗೆ ಮತ್ತೊಮ್ಮೆ ಸಮಾಲೋಚನೆ ಮಾಡುತ್ತೇನೆ. ನಾನೂ ವೇದಿಕೆ ಮೇಲೆ ಇದ್ದೆ. ಆದರೆ ಸಂಜಯ್ ಪಾಟೀಲ್ ಇದಕ್ಕೆ ಸ್ಪಷ್ಟೀಕರಣ ನೀಡಿದರೆ ಉತ್ತಮ. ನಾವು ಎಲ್ಲ ಕಾರ್ಯಕ್ರಮಗಳಲ್ಲೂ ವೇದಿಕೆ ಮೇಲೆ ಇರುತ್ತೇವೆ. ಎಲ್ಲರ ಭಾಷಣ ಗ್ರಹಿಸಿಕೊಳ್ಳಲು ಸಾಧ್ಯವಾಗಲ್ಲ. ಹೀಗಾಗಿ ಸಂಜಯ್ ಪಾಟೀಲ್ ಜೊತೆಗೆ ಸಮಾಲೋಚನೆ ಮಾಡಿ ನಿರ್ಧಾರಕ್ಕೆ ಬರುತ್ತೇನೆ ಎಂದು ಅವರು ತಿಳಿಸಿದರು.