ಬಿಜೆಪಿ ಅಭ್ಯರ್ಥಿ ಶೆಟ್ಟರ್ ಸಂದರ್ಶನ ಬೆಳಗಾವಿ: ''ಇಡೀ ಕರ್ನಾಟಕ, ಬೆಳಗಾವಿ ನನ್ನ ಕರ್ಮಭೂಮಿ. ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕನಾಗಿ ಇಡೀ ರಾಜ್ಯ ಸುತ್ತಿದ್ದೇನೆ. ಅದರಲ್ಲೂ ಬೆಳಗಾವಿಯಲ್ಲಿ ನಾನು ಬಹಳಷ್ಟು ಪ್ರವಾಸ ಮಾಡಿದ್ದು, 30 ವರ್ಷಗಳ ಸಂಬಂಧವಿದೆ. ಆ 30 ವರ್ಷಗಳಲ್ಲಿ ಅವರು ಎಲ್ಲಿದ್ದರು ಅಂತಾ ನನಗೆ ಗೊತ್ತಿಲ್ಲ. ಆದರೆ, ನಾನು ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ'' ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿರುಗೇಟು ನೀಡಿದರು.
''ಜಗದೀಶ್ ಶೆಟ್ಟರ್ ಅಡ್ರೆಸ್ ಎಲ್ಲಿದೆ''? ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕೆಗೆ ಈಟಿವಿ ಭಾರತದ ಪ್ರತಿನಿಧಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶೆಟ್ಟರ್ ಅವರು, ''ಅವ್ರು ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸಲಿ. ಇಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ನಾನು ಹೋಗೋದಿಲ್ಲ. ಬೆಳಗಾವಿಗರು ನನ್ನನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ನನ್ನ ಹೃದಯದಲ್ಲಿ ಬೆಳಗಾವಿ ಜನರಿದ್ದಾರೆ. ಬೆಳಗಾವಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಇಡೀ ಬೆಳಗಾವಿ ಲೋಕಸಭೆ ಕ್ಷೇತ್ರವೇ ನನ್ನ ಅಡ್ರೆಸ್'' ಎಂದು ಟಾಂಗ್ ಕೊಟ್ಟರು.
ನಾಯಕರ ಜೊತೆ ಉತ್ತಮ ಒಡನಾಟ:''ಇವತ್ತು, ನಿನ್ನೆಯದಲ್ಲ.. ಬೆಳಗಾವಿಗೂ ನನಗೂ 30 ವರ್ಷಗಳ ಸಂಬಂಧವಿದೆ. ಬೆಳಗಾವಿ, ಧಾರವಾಡ ಅಕ್ಕ ಪಕ್ಕದ ಜಿಲ್ಲೆಗಳು. ನಮ್ಮ ಬೀಗರ ಊರು ಇದು. ದಿ. ಸುರೇಶ ಅಂಗಡಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ, ಅವರು ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಆಗ ಇಡೀ ಜಿಲ್ಲೆಯಲ್ಲಿ ಓಡಾಟ ಮಾಡಿ, ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇನೆ. ಇಲ್ಲಿನ ಎಲ್ಲ ನಾಯಕರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದೇನೆ'' ಎಂದು ಜಗದೀಶ ಶೆಟ್ಟರ್ ಹೇಳಿದರು.
''ವಿರೋಧ ಪಕ್ಷದ ನಾಯಕನಾಗಿ ಈ ಭಾಗದ ಅಭಿವೃದ್ಧಿ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಅಲ್ಲದೇ ಈ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ನಾನು ಸ್ಪೀಕರ್ ಆಗಿದ್ದಾಗ ಸುವರ್ಣ ವಿಧಾನಸೌಧದ ನಿರ್ಮಾಣಕ್ಕೆ ಜಾಗವನ್ನು ಪರಿಶೀಲಿಸಿ, ಆಯ್ಕೆ ಮಾಡಿದ್ದು ನನ್ನ ಅಧ್ಯಕ್ಷತೆ ಕಮಿಟಿ. ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಮತ್ತು ನಾನು ಸೌಧ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ಸಲ್ಲಿಸಿದ್ದೆವು. ಆ ಬಳಿಕ 2012ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಕರೆಸಿ, ಸುವರ್ಣ ವಿಧಾನಸೌಧವನ್ನು ಉದ್ಘಾಟಿಸಿದ್ದೆ. ಅದು ನಮ್ಮ ಕಾಲದಲ್ಲಿ ಆಗಿರುವ ಹೆಮ್ಮೆ ನಮಗಿದೆ. ಹಾಗಾಗಿ, ಇದರಲ್ಲಿ ನನ್ನದು ಹೆಚ್ಚಿನ ಕಾಣಿಕೆ ಇದೆ'' ಎಂದು ಶೆಟ್ಟರ್ ಸಮರ್ಥಿಸಿಕೊಂಡರು.
ಜನರಿಗೆ ಶೆಟ್ಟರ್ ಮೇಲೆ ಪ್ರೀತಿಯಿದೆ: ''ಕೋವಿಡ್ ಸಂದರ್ಭದಲ್ಲಿ ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆಗ ಕೋವಿಡ್ ನಿಯಂತ್ರಿಸಲು ಎಲ್ಲ ರೀತಿ ಪ್ರಯತ್ನ ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವನಾಗಿದ್ದಾಗ ಕುಡಿಯುವ ನೀರಿನ ಯೋಜನೆ ಜಾರಿ, ಉತ್ತಮ ಗ್ರಾಪಂ ಆಯ್ಕೆ ಮಾಡುವುದು ಸೇರಿ ಅನೇಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಬಹಳ ದೊಡ್ಡ ಬದಲಾವಣೆ ತರುವ ಕೆಲಸ ಮಾಡಿದ್ದೇನೆ. ಹಾಗಾಗಿ, ಬೆಳಗಾವಿ ಜನರಿಗೆ ಜಗದೀಶ ಶೆಟ್ಟರ್ ಎಂದರೆ ತುಂಬಾ ಪ್ರೀತಿಯಿದೆ. ನಾನು ಮೊದಲ ದಿನ ಬೆಳಗಾವಿಗೆ ಬಂದಾಗ 10 ಸಾವಿರಕ್ಕೂ ಹೆಚ್ಚು ಜನ ಸೇರಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಅಲ್ಲದೇ ನಾ ಹೋದಲ್ಲೆಲ್ಲಾ ಬಹಳಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಿರೋದು ನೋಡಿದರೆ ನನಗೆ ದೊಡ್ಡ ಬೆಂಬಲದ ಶಕ್ತಿ ಸಿಗುತ್ತಿದ್ದು, ಗೆಲುವಿನ ಆತ್ಮವಿಶ್ವಾಸ ಮೂಡಿದೆ'' ಎಂದರು.
ಬೆಳಗಾವಿ ಅಭಿವೃದ್ಧಿಗೆ ಪಣ:ಏನೇನು ಕೆಲಸ ಮಾಡುತ್ತೇನೆ ಅಂತಾ ಹೇಳಿ ಮತ ಕೇಳುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಶೆಟ್ಟರ್, ''ಬೆಳಗಾವಿ 2ನೇ ರಾಜಧಾನಿ ಎಂದು ಜನ ಮತ್ತು ಸರ್ಕಾರ ಒಪ್ಪಿಕೊಂಡಿದೆ. ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಣ ಬಂದಿದ್ದು, ಕಾಮಗಾರಿಗಳು ನಡೆಯುತ್ತಿವೆ. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಉಡಾನ್ ಯೋಜನೆಯಡಿ ದೇಶದ ಪ್ರಮುಖ ನಗರಗಳಿಗೆ ವಿಮಾನ ಸೇವೆ ಆರಂಭವಾಯಿತು. ಅಲ್ಲದೇ 2ನೇ ಟರ್ಮಿನಲ್ ನಿರ್ಮಾಣಕ್ಕೆ 310 ಕೋಟಿ ಹಣ ಬಿಡುಗಡೆ ಆಗಿದ್ದು, ಇತ್ತೀಚೆಗೆ ಪ್ರಧಾನಿ ಮೋದಿಯವರು ಭೂಮಿ ಪೂಜೆ ಕೂಡ ನೆರವೇರಿಸಿದ್ದಾರೆ. ಭವಿಷ್ಯದಲ್ಲಿ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪರಿವರ್ತನೆ ಆಗಲಿದೆ. ಇದರಿಂದ ಇಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿದ್ದು, ದೊಡ್ಡ ಕೈಗಾರಿಕೆಗಳು ಇಲ್ಲಿಗೆ ಬರಲಿವೆ. ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುತ್ತೇನೆ. ಬೆಳಗಾವಿ ನಗರ ಸೇರಿ ಇಡೀ ಲೋಕಸಭೆ ಕ್ಷೇತ್ರವನ್ನು ಸುಂದರವಾಗಿ ಮಾಡಲು ಎಲ್ಲ ಯತ್ನ ಮಾಡುತ್ತೇನೆ'' ಎಂದು ಭರವಸೆ ನೀಡಿದರು.
ಮೋದಿ ಕೈ ಬಲಪಡಿಸಬೇಕಿದೆ: ''ಬೆಳಗಾವಿ ಲೋಕಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂಬುದು ದೇಶದ 140 ಕೋಟಿ ಜನರ ಆಶಯವಾಗಿದೆ. ಅದು ಈಡೇರಬೇಕಾದರೆ ನಾವೆಲ್ಲರೂ ಕೂಡಿ ಮೋದಿ ಅವರ ಕೈ ಬಲಪಡಿಸಬೇಕಿದೆ. ಎಲ್ಲರೂ ಮೋದಿಯವರಿಗೆ ಬೆಂಬಲಿಸಿ, ಶಕ್ತಿ ಕೊಡುವ ಮೂಲಕ ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಿದರೆ, ದೇಶದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಅದೇ ರೀತಿ ಬೆಳಗಾವಿಯಲ್ಲೂ ದೊಡ್ಡ ಪ್ರಮಾಣದ ಪ್ರಗತಿ ಆಗಲೂ ನಾವೆಲ್ಲ ಕೈ ಜೋಡಿಸೋಣ. ನಾನು ಮೋದಿಯವರ ಪ್ರತಿನಿಧಿಯಾಗಿ ನಾನು ಚುನಾವಣೆಗೆ ನಿಂತಿದ್ದೇನೆ. ನನಗೆ ಮತ ಹಾಕಿದರೆ, ಮೋದಿ ಮತ್ತು ಬಿಜೆಪಿಗೆ ಮತ ಹಾಕಿದಂತೆ. ಅದರಿಂದ ಹೊಸ ಬದಲಾವಣೆ ಆಗಲಿದ್ದು, ದಯವಿಟ್ಟು ನನಗೆ ಬೆಂಬಲಿಸಿ'' ಎಂದು ಜಗದೀಶ್ ಶೆಟ್ಟರ್ ಕೋರಿದರು.
ಓದಿ:ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ - Fakir Dingaleshwara Swamiji