ಮಂಗಳೂರು: ಕರಾವಳಿಯಲ್ಲಿ ಬಿಜೆಪಿ ತನ್ನ ಕೋಟೆಯನ್ನು ಭದ್ರವಾಗಿಸಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಲವು ಲೆಕ್ಕಾಚಾರಗಳನ್ನು ಮಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕರಾವಳಿಯ ಜನ ಹಿಂದುತ್ವವನ್ನು ಕೈ ಬಿಡದೆ ಮತ್ತೊಮ್ಮೆ ಕಮಲ ಅರಳಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ 33 ವರ್ಷಗಳಿಂದ ಸೋಲು ಕಂಡಿದ್ದ ಕಾಂಗ್ರೆಸ್ ಈ ಬಾರಿ ಗೆಲುವು ಸಾಧಿಸುವ ಆತ್ಮ ವಿಶ್ವಾಸ ಹೊಂದಿತ್ತು. ಅದೇ ರೀತಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಕಾಂಗ್ರೆಸ್ ಸೋಲು ಕಂಡಿದ್ದು, ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಎರಡು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲಾಗಿದೆ.
ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ:ಹಿಂದೊಮ್ಮೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ 1991 ರ ಬಳಿಕ ಕೇಸರಿ ಕೋಟೆಯಾಗಿ ಬದಲಾಗಿದೆ. ಆದರೆ ಈ ಬಾರಿ ಗೆಲ್ಲುವ ಅದಮ್ಯ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿತ್ತು. ಪ್ರಬಲ ಸಮುದಾಯ ಬಿಲ್ಲವ ಮುಖಂಡ ಪದ್ಮರಾಜ್ ಪೂಜಾರಿಯವರನ್ನು ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ ದಕ್ಷಿಣ ಕನ್ನಡದಲ್ಲಿ ಗೆಲ್ಲುವ ಲೆಕ್ಕಾಚಾರ ಮಾಡಿತ್ತು. ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ದೊಡ್ಡ ಮತದಾರರಿದ್ದಾರೆ. ಜೊತೆಗೆ ಇವರು ಸಾಂಪ್ರದಾಯಿಕ ಬಿಜೆಪಿ ಮತದಾರರು. ಆದ್ದರಿಂದ ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಅದೇ ಸಮುದಾಯದ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬ ಆತ್ಮವಿಶ್ವಾಸವನ್ನು ಕಾಂಗ್ರೆಸ್ ಹೊಂದಿತ್ತು. ಇದಕ್ಕಾಗಿ ಹೆಚ್ಚಿನ ಬಿಲ್ಲವ ಮುಖಂಡರು ಒಟ್ಟಾಗಿ ಪದ್ಮರಾಜ್ ಪರ ಕೆಲ ಕೆಲಸ ಮಾಡಿದ್ದರು. ಅದೇ ರೀತಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ಹೊಂದಿದ್ದರು. ಈ ಕಾರಣದಿಂದ ಈ ಬಾರಿ ಸ್ವಲ್ಪ ಮತಗಳ ಅಂತರದಿಂದಾದರೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಮತದಾರರು ಮತ್ತೆ ಬಿಜೆಪಿಗೆ ಜೈ ಅಂದಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿದ್ದ ಕ್ಯಾ.ಬ್ರಜೇಶ್ ಚೌಟ್ ಅವರು 7,64,132 ಮತ ಪಡೆದಿದ್ದಾರೆ. ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ 6,14,924 ಮತ ಗಳಿಸಿದ್ದಾರೆ. ಇದರಿಂದಾಗಿ 1,49,208 ಮತಗಳ ಅಂತರದಿಂದ ಬಿಜೆಪಿ ಜಯಭೇರಿ ಬಾರಿಸಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಿಂದ ರಾಷ್ಟ್ರಕ್ಕೆ: ಒಟ್ಟಿಗೆ ದೆಹಲಿ ವಿಮಾನವೇರಿದ ಇಬ್ಬರು ಮಾಜಿ ಸಿಎಂಗಳು - Union Cabinet Meeting