ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ಹಗರಣ: ಆರೋಪಿ ಶ್ರೀಕಿ ಸೇರಿ ಇಬ್ಬರ ವಿರುದ್ಧದ ಕೋಕಾ ಕಾಯ್ದೆ ರದ್ದುಪಡಿಸಿದ ಹೈಕೋರ್ಟ್ - Bitcoin Scam - BITCOIN SCAM

ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕಿ ಮತ್ತು ರಾಬಿನ್‌ ಖಂಡೇಲ್‌ವಾಲಾ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

High Court
ಹೈಕೋರ್ಟ್ (ETV Bharat)

By ETV Bharat Karnataka Team

Published : Jul 3, 2024, 9:49 PM IST

ಬೆಂಗಳೂರು: ಬಹುಕೋಟಿ ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕಿ ಮತ್ತು ರಾಬಿನ್‌ ಖಂಡೇಲ್‌ವಾಲಾ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ–2000) ಹೇರಿ ಸಿಐಡಿಯ ಜಿಡಿಪಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿ ಆದೇಶಿಸಿದೆ.

ಸಿಐಡಿಯ ಡಿಜಿಪಿ 2024ರ ಮೇ 20ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಹಾಗೂ ಪಶ್ಚಿಮ ಬಂಗಾಳದ ರಾಬಿನ್‌ ಖಂಡೇಲ್‌ವಾಲಾ ಸಲ್ಲಿಸಿದ್ದ ಎರಡು ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್ ಅವರ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಗಳಿಗೆ ಜಾಮೀನು ದೊರೆಯಬಾರದು ಎಂಬ ಏಕೈಕ ದುರುದ್ದೇಶದಿಂದ ಕೋಕಾ ಕಾಯ್ದೆಯನ್ನು ಕಾನೂನುಬಾಹಿರವಾಗಿ ಅನ್ವಯಿಸಲಾಗಿದೆ. ಪ್ರಕರಣ ಸಂಬಂಧ ತುಮಕೂರು ಪೊಲೀಸರು ಸಿ-ರಿಪೋರ್ಟ್‌ ಸಲ್ಲಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ, ಆ ಬಳಿಕ ಕೋಕಾ ಕಾಯ್ದೆಯನ್ನು ಅನ್ವಯಿಸಲಾಗಿದೆ. ಈ ವೇಳೆ, ಸಿಯಡಿ ಡಿಜಿಪಿಯು ಸೂಕ್ತವಾಗಿ ವಿವೇಚನೆ ಮತ್ತು ಕಾನೂನು ಪಾಲನೆ ಮಾಡಿಲ್ಲ. ಆದ್ದರಿಂದ ಕೋಕಾ ಕಾಯ್ದೆ ರದ್ದುಪಡಿಸಬೇಕು ಎಂದು ಕೋರಿದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಿ ಸಿಐಡಿ ಡಿಜಿಪಿ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ:ಬಿಟ್‌ ಕಾಯಿನ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಿ-ರಿಪೋರ್ಟ್‌ ಸಲ್ಲಿಸಿ, ಅಪರಾಧ ನಡೆದಿರುವುದು ನಿಜ. ಆದರೆ, ಯಾರು ಅಪರಾಧಿಗಳು ಎಂಬುದು ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ನಂತರ ಈ ಪ್ರಕರಣವನ್ನು ಸೈಬರ್‌ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 2023ರಲ್ಲಿ ಜುಲೈನಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತದನಂತರ ಶ್ರೀಕಿಯನ್ನು ಬಂಧಿಸಲಾಗಿತ್ತು. ನಂತರ ಕೋಕಾ ಕಾಯ್ದೆ ಅನ್ವಯಗೊಳಿಸಿ, ರಾಬಿನ್‌ ಅನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳವಿಲ್ಲ: ಬಿಬಿಎಂಪಿ ಸ್ಪಷ್ಟನೆ

ABOUT THE AUTHOR

...view details