ಮೈಸೂರು : ಗಂಡು ಮಕ್ಕಳಿಲ್ಲವೆಂದು ಹೆಂಡತಿ ಮಕ್ಕಳನ್ನು ಬಿಟ್ಟು ಹೋದ ತಂದೆ ಮೇಲಿನ ಸವಾಲಿಗಾಗಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬಾಕ್ಸಿಂಗ್ನಲ್ಲಿ ಸಾಧನೆ ಮಾಡಿದವರು ಈ ಧೀರೆ. ಮುಸ್ಲಿಂ ಸಮುದಾಯದಿಂದ ಬಂದರೂ, ತಂದೆ ಮೇಲಿನ ಕೋಪಕ್ಕಾಗಿ ಕಿಕ್ ಬಾಕ್ಸಿಂಗ್ನಲ್ಲಿ 29 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡು ಬೀಗಿದವರು ಮೈಸೂರಿನ ಬೀಬಿ ಫಾತಿಮಾ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು ಓರ್ವ ಮಂಗಳಮುಖಿ.
ಬೀಬಿ ಫಾತಿಮಾರ ತಾಯಿಗೆ ಇವರೂ ಸೇರಿದಂತೆ ನಾಲ್ವರು ಹೆಣ್ಣು ಮಕ್ಕಳು. ತಂದೆಯಾದವನು ತನಗೆ ನಾಲ್ಕು ಹೆಣ್ಣು ಮಕ್ಕಳೇ, ಗಂಡು ಮಕ್ಕಳಿಲ್ಲ ಎಂದು ಹೆಂಡತಿ, ಮಕ್ಕಳನ್ನು ಬಿಟ್ಟು ಹೋಗಿದ್ದಾನೆ. ಸಾಯುವ ನಿರ್ಧಾರಕ್ಕೆ ಬಂದಿದ್ದ ಇಡೀ ಕುಟುಂಬಕ್ಕೆ ಆಸರೆಯಾಗಿದ್ದು ಮಂಗಳಮುಖಿ. ಆ ಮಂಗಳಮುಖಿ ಅಕ್ರಮ್ ಪಾಷಾ ಅವರೇ ಇಡೀ ಕುಟುಂಬವನ್ನು ಸಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಆ ಮನೆಯ ಹೆಣ್ಣು ಮಗಳು ಆಕಾಶದೆತ್ತರಕ್ಕೆ ಕಂಡ ಕನಸನ್ನು ನನಸು ಮಾಡಲು ನಿಂತವರು ಇದೇ ಅಕ್ರಮ್ ಪಾಷಾ.
ಇಲ್ಲಿಯವರೆಗೆ ಬೀಬಿ ಫಾತಿಮಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ 29 ಚಿನ್ನದ ಪದಕಗಳನ್ನು ಹಾಗೂ ಕಳೆದ ವಾರ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದು, ಹೆಣ್ಣು ಮಗುವೆಂದು ಜರಿಯುವವರಿಗೆ ಸಾಧನೆಯ ಮೂಲಕ ಉತ್ತರ ನೀಡಿದ್ದಾರೆ.
ತಂದೆಗೆ ಸಾಧಿಸಿ ತೋರಿಸುವ ಛಲ ಇದೆ :ಈಟಿವಿ ಭಾರತ ಜೊತೆ ಮಾತನಾಡಿ ಬೀಬಿ ಫಾತಿಮಾ, "ಹುಟ್ಟಿದ ನಾಲ್ಕೂ ಮಕ್ಕಳು ಹೆಣ್ಣಾದವು, ಗಂಡು ಸಂತಾನವಿಲ್ಲವೆಂದು ತಂದೆ, ತಾಯಿ ಸೇರಿ ಮಕ್ಕಳೆಲ್ಲರನ್ನು ತೊರೆದು ಹೋದರು. ಆಗ ಅಕ್ರಮ್ ಪಾಷಾ ಅಲಿಯಾಸ್ ಶಬ್ನಾ ಎಂಬ ಮಂಗಳಮುಖಿ ಅವರು ನಮ್ಮನ್ನು ದತ್ತು ಪಡೆದು ಸಾಕುತ್ತಿದ್ದಾರೆ. ನಮ್ಮ ಜೀವನ, ವಿದ್ಯಾಭ್ಯಾಸ, ನಿತ್ಯ ಜೀವನಕ್ಕೆ ಬೇಕಾದ ಅಗತ್ಯತೆಗಳನ್ನು ಎಲ್ಲವನ್ನೂ ಶಬ್ನಾ ಅವರೇ ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ನಾನು ಎಸ್.ಎಸ್.ಎಲ್.ಸಿ. ಓದುತ್ತಿದ್ದೇನೆ. ಗಂಡು - ಹೆಣ್ಣು ಸಮಾನರು ಎಂದು ತೋರಿಸಲು ಕಿಕ್ ಬಾಕ್ಸಿಂಗ್ ಆಯ್ಕೆ ಮಾಡಿಕೊಂಡಿದ್ದೇನೆ. ಹೆಣ್ಣಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ್ದೇನೆ. ಈ ಸಾಧನೆಯನ್ನು ನನ್ನ ತಂದೆಯ ಮುಂದೆ ತೋರಿಸುವ ಛಲ ನನ್ನಲ್ಲಿದೆ" ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಒಲಂಪಿಕ್ನಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುವ ಆಸೆ :12 ವರ್ಷದಿಂದ ಬಾಕ್ಸಿಂಗ್ ತರಬೇತಿಯಲ್ಲಿ ತೊಡಗಿದ್ದೇನೆ. ಜಸ್ವಂತ್ ಅವರ ಬಳಿ ತರಬೇತಿ ಪಡೆಯುತ್ತಿದ್ದೇನೆ. ಅವರ ಸಹಕಾರ ಬಹಳ ಇದೆ. ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದೇನೆ. 29 ಚಿನ್ನ, 2 ಬೆಳ್ಳಿ ಪದಕಗಳನ್ನು ಗೆದ್ದಿದ್ದೇನೆ. ಒಲಂಪಿಕ್ನಲ್ಲಿ ದೇಶಕ್ಕಾಗಿ ಆಡಿ, ಪದಕ ಗೆಲ್ಲಬೇಕು ಎಂಬುದು ನನ್ನ ಕನಸು. ಒಲಿಂಪಿಕ್ಗೆ ಹೋಗಲು ಮೈಸೂರಿಗರು, ರಾಜ್ಯದ ಜನತೆ, ಹಾಗೂ ಸರ್ಕಾರದ ಸಹಾಯದ ನೀರಿಕ್ಷೆಯಲ್ಲಿದ್ದೇವೆ ಎಂದು ಬೀಬಿ ಫಾತಿಮಾ ಹೇಳಿದರು.