ಬೆಂಗಳೂರು: ಸಂಬಳ ಕೊಡದ ಹೊಟೇಲ್ ಮಾಲೀಕ ಬೈಕ್ ಕಳ್ಳತನ ಮಾಡು ಎಂದು ತಮಾಷೆಯಾಗಿ ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡಿ ಇದೀಗ ಮಡಿವಾಳ ಪೊಲೀಸರ ಅತಿಥಿಯಾಗಿದ್ದಾನೆ.
ಅಖೀಬ್ ಖಾನ್ (23) ಬಂಧಿತ ಆರೋಪಿ. ಕೇರಳ ಮೂಲದ ಈತ ಕೆಲ ತಿಂಗಳಿಂದ ಮಡಿವಾಳದ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೆಚ್ಚುವರಿಯಾಗಿ ದುಡಿಸಿಕೊಂಡು ಸರಿಯಾಗಿ ಸಂಬಳ ನೀಡದ ಆರೋಪ ಮಾಲೀಕ ಆಸಿಫ್ ಮೇಲಿತ್ತು. ಇತ್ತೀಚೆಗೆ ಸಂಬಳ ಕೊಟ್ಟರೆ ಕೆಲಸ ಬಿಟ್ಟು ಹೋಗುತ್ತೇನೆ. ಊರಿಗೆ ಹೋಗಲು ಹಣವಿಲ್ಲ ಎಂದು ಮಾಲೀಕನಿಗೆ ಆಖೀಬ್ ಖಾನ್ ತಿಳಿಸಿದ್ದ. ಇದಕ್ಕೆ ಮಾಲೀಕ ಹೊಟೇಲ್ ಬಳಿ ಎಷ್ಟೊಂದು ಬೈಕ್ಗಳಿವೆ ಕಳ್ಳತನ ಮಾಡು ಎಂದು ತಮಾಷೆಯಾಗಿ ಹೇಳಿದ್ದ.
ಇದನ್ನೇ ಗಂಭೀರವಾಗಿ ಪರಿಗಣಿಸಿದ ಆರೋಪಿಯು ಯೂಟ್ಯೂಬ್ನಲ್ಲಿ ಸರ್ಚ್ ಮಾಡಿ ಬೈಕ್ ಲಾಕ್ ಓಪನ್ ಮಾಡುವುದು ಹೇಗೆ ಎಂದು ತಿಳಿದು ಮಡಿವಾಳದ ಅಯ್ಯಪ್ಪ ದೇವಸ್ಥಾನ ಬಳಿ ನಿಲ್ಲಿಸಿದ್ದ ಆರ್ಎಕ್ಸ್ 100 ಬೈಕ್ ಕಳ್ಳತನ ಮಾಡಿದ್ದಾನೆ. ಕದ್ದ ಬೈಕ್ನಲ್ಲೇ ಕೇರಳಕ್ಕೆ ತೆರಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯಾರು ಎಂಬುದನ್ನು ಪತ್ತೆ ಹಚ್ಚಿದ್ದರು.
ಮತ್ತೊಂದಡೆ ಬೈಕ್ ಕದ್ದಿರುವುದು ತಿಳಿದ ಆತನ ಪೋಷಕರು ಬೈದಿದ್ದರಿಂದ ವಿಧಿಯಿಲ್ಲದೇ ಮತ್ತೆ ಬೆಂಗಳೂರಿಗೆ ಬರುವಾಗ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿದಾಗ ಹೊಟೇಲ್ ಮಾಲೀಕರು ಸಂಬಳ ನೀಡಿರಲಿಲ್ಲ. ಹೀಗಾಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಕಳ್ಳತನ ಮಾಡು ಎಂದು ಸೂಚಿಸಿದ್ದ ಹೊಟೇಲ್ ಮಾಲೀಕನಿಗೂ ನೊಟೀಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ:ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಶೂ- ಚಪ್ಪಲಿ ಕಳ್ಳತನ : ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ