ಕರ್ನಾಟಕ

karnataka

ETV Bharat / state

ಮಲೀನವಾದ ವೃಷಭಾವತಿ ನದಿ ಸ್ವಚ್ಛಗೊಳಿಸಲು ಮುಂದಾದ ಬೆಂಗಳೂರು ವಿವಿ

ಮಲೀನಗೊಂಡಿರುವ ವೃಷಭಾವತಿ ನದಿ ಸ್ವಚ್ಛಗೊಳಿಸಲು ಬೆಂಗಳೂರು ವಿವಿ ಮುಂದಾಗಿದೆ. ಸ್ವಚ್ಛವಾದ ನದಿ ನೀರಲ್ಲಿ ಕೆರೆ ತುಂಬಿಸಿ, ವಿವಿ ಆವರಣದಲ್ಲಿ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಸೆಳೆಯುವ ಯೋಜನೆ ಕೂಡ ಸಿದ್ಧಪಡಿಸಲಾಗಿದೆ.

ಮಲೀನವಾದ ವೃಷಭಾವತಿ ನದಿ ಸ್ವಚ್ಛಗೊಳಿಸಲು ಮುಂದಾದ ಬೆಂಗಳೂರು ವಿವಿ
ಮಲೀನವಾದ ವೃಷಭಾವತಿ ನದಿ ಸ್ವಚ್ಛಗೊಳಿಸಲು ಮುಂದಾದ ಬೆಂಗಳೂರು ವಿವಿ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:ಕಲುಷಿತ ನೀರಿನಿಂದ ಮಲೀನವಾಗಿರುವ ವೃಷಭಾವತಿ ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದ್ದು, ನೀಲನಕ್ಷೆಗೆ ಸಿದ್ಧಪಡಿಸಲು ಸಕಲ ತಯಾರಿ ನಡೆಸುತ್ತಿದೆ.

ನದಿಯ ನೀರನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವಿಭಾಗದ ಡೀನ್ ಪಿಎಂಇಬಿ ನಿರ್ದೇಶಕ ಪ್ರೊ.ಅಶೋಕ್ ಡಿ.ಹಂಜರಗಿ ನೇತೃತ್ವದ ತಂಡವನ್ನು ರಚಿಸಲಾಗಿದೆ. ಉಪಕುಲಪತಿ ಸೇರಿದಂತೆ ಸಿಬ್ಬಂದಿ ಈ ತಂಡದಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದಾರೆ. ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಮತ್ತು ಹಲವು ಕಂಪನಿಗಳ ಸಿಎಸ್‌ಆರ್​​ಫಂಡ್ ಸಹಾಯದೊಂದಿಗೆ ಸ್ವಚ್ಛತೆಗೆ ವಿವಿ ಮುಂದಾಗಿದೆ.

ವೃಷಭಾವತಿ ನದಿಯು ಕೋಳಚೆ ನೀರು, ಪ್ಲಾಸ್ಟಿಕ್, ಘನತ್ಯಾಜ್ಯಗಳಿಂದಾಗಿ ತುಂಬಿದೆ. ಇದರಿಂದಾಗಿ ಬೆಂಗಳೂರು ವಿವಿ ಕ್ಯಾಂಪಸ್​ನಲ್ಲಿರುವ ವಿದ್ಯಾರ್ಥಿಗಳು, ಬೋಧನಾ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿಗೆ ಹಾಗೂ ಸುತ್ತಮುತ್ತ ವಾಸವಿರುವ ಸಾರ್ವಜನಿಕರಿಗೆ ಕಲುಷಿತವಾದ ನದಿ ನೀರಿನಿಂದಾಗಿ ಹಲವು ರೋಗಗಳು ಬರುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ವೃಷಭಾವತಿ ಸ್ವಚ್ಛತೆ ಮಾಡಲು ವಿವಿ ನಿರ್ಧರಿಸಿದೆ. ಅಷ್ಟೇ ಅಲ್ಲ ನದಿಯನ್ನು ಶುದ್ಧೀಕರಿಸಿ, ಆ ನೀರನ್ನು ಬಳಸಿಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಹಸಿರೀಕರಣಗೊಳಿಸುವ ಯೋಜನೆ ಕೂಡ ಇದಾಗಿದೆ.

ಮಾಲಿನ್ಯದಿಂದ ಅನೇಕ ಸಮಸ್ಯೆ:ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಸುತ್ತಮುತ್ತ ವೃಷಭಾವತಿ ನದಿ ಹರಿಯುತ್ತಿದ್ದು, ಅದರ ಮಾಲಿನ್ಯದಿಂದ ಅನೇಕ ಸಮಸ್ಯೆಯಾಗುತ್ತಿದೆ. ಇದರಿಂದ ವಿವಿಯಲ್ಲಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಹಲವು ಆರೋಗ್ಯ ಸಮಸ್ಯೆಯಾಗುತ್ತಿದೆ. ಆದ್ದರಿಂದ ಎಂಟ್ರಿ ಸಂಸ್ಥೆ ಹಾಗೂ ಆರ್ಟ್ ಆಫ್ ಲಿವೀಂಗ್ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪ್ರೊ.ಅಶೋಕ್ ಡಿ.ಹಂಜರಗಿ ತಿಳಿಸಿದ್ದಾರೆ.

ಹಲಸಿನ ಹಣ್ಣು, ಅತ್ತಿ ಹಣ್ಣು, ತರಕಾರಿ, ಸೊಪ್ಪು ಬೆಳೆಸುವ ಯೋಜನೆ:'ವೃಷಭಾವತಿಯನ್ನು ಶುದ್ಧೀಕರಣಗೊಳಿಸಿದ ಬಳಿಕ ಈ ಶುದ್ಧೀಕರಣಗೊಂಡ ನೀರನ್ನು ಕ್ಯಾಂಪಸ್​​ನಲ್ಲಿರುವ ಸಣ್ಣ ಕೆರೆಗೆ ಹರಿಸಲಾಗುತ್ತದೆ. ಈ ನೀರನ್ನು ಹಸಿರೀಕರಣಕ್ಕೆ ಉಪಯೋಗಿಸಿಕೊಂಡು ಕಾಲೇಜಿನ ಆವರಣದಲ್ಲಿ ಗಿಡಗಳನ್ನು, ವಿವಿಧ ಸಸಿಗಳನ್ನು ನೆಡಲು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಹಲಸಿನ ಹಣ್ಣು, ಅತ್ತಿ ಹಣ್ಣು, ತರಕಾರಿ, ಸೊಪ್ಪು ಬೆಳೆಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಹಾವು, ಕಪ್ಪೆ, ಏಡಿ, ಮೀನುಗಳಿಗೆ ಕೆರೆಯ ನೀರು ಆಸರೆ ಆಗುವುದರಿಂದ ಪಕ್ಷಿಗಳಿಗೂ ಆಶ್ರಯ ಕಲ್ಪಿಸುವ ಉದ್ದೇಶವಿದೆ' ಎಂದು ಮಾಹಿತಿ ನೀಡಿದರು.

ಸ್ವಚ್ಛಗೊಳಿಸುವ ಮೊದಲ ಹಂತದಲ್ಲಿ ಮೆಷ್ ನೆಟ್‌ಗಳನ್ನು ಬಳಸಿಕೊಂಡು ತ್ಯಾಜ್ಯಗಳನ್ನು ತೆಗೆಯಲಾಗುವುದು. ಬಳಿಕ ಸಣ್ಣ ಸಣ್ಣ ತಡೆಗೋಡೆಗಳ ಮಾದರಿ ನಿರ್ಮಿಸಿ ಸಣ್ಣ ಪ್ರಮಾಣದಲ್ಲಿ ನೀರನ್ನು ಶುದ್ಧೀಕರಿಸಲಾಗುವುದು. ಕಲ್ಲು, ಮರಳುಗಳನ್ನು ಬಳಸಿಕೊಂಡು ಸಹ ಸ್ವಚ್ಛತೆ ನಡೆಯಲಿದೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಮಳೆ: ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ

ABOUT THE AUTHOR

...view details