ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಸಕ್ರಿಯವಾಗಿದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಹೌದು, ಜಾಲಹಳ್ಳಿಯ ಕುವೆಂಪು ವೃತ್ತದ ಅಂಡರ್ ಪಾಸ್ನಲ್ಲಿ ಮುಷ್ಟಿಗಟ್ಟಲೇ ಮೊಳೆಗಳು ಪತ್ತೆಯಾಗಿವೆ. ಸ್ವತಃ ಟ್ರಾಫಿಕ್ ಪೊಲೀಸರೇ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೊಳೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಂಚಾರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊಳೆಗಳು ರಸ್ತೆ ಮೇಲೆ ಬಿದ್ದಿರುವುದರ ಹಿಂದೆ ಸುತ್ತಮುತ್ತಲಿನ ಪಂಕ್ಚರ್ ಶಾಪ್ಗಳ ಕೈವಾಡವಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದ್ದಾರೆಯೇ?. ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂಚಾರ ಪೊಲೀಸರಿಗೆ ಸಲಹೆ ಕೂಡಾ ನೀಡಿದ್ದಾರೆ.