ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದಲ್ಲಿ ಡೆಂಘೀ ಹೆಚ್ಚಾಗುತ್ತಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಕೂಡ ಡೆಂಘೀ ರೋಗ ಕಾಣಿಸಿಕೊಂಡಿದೆ. ಸದ್ಯ ರಜೆಯಲ್ಲಿರುವ ಅವರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 5,187 ಡೆಂಘೀ ಪ್ರಕರಣಗಳು ಪತ್ತೆ ಆಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ 1,230 ಡೆಂಘೀ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಜನವರಿಯಿಂದ 3,975 ಕೇಸ್ಗಳು ಪತ್ತೆ ಆಗಿದ್ದು, ಜೂನ್ ತಿಂಗಳಿನಿಂದ ಕೇಸ್‌ಗಳ ಸಂಖ್ಯೆ ಏರಿಕೆ ಕಂಡಿದೆ. ಡೆಂಘೀ ಕೇಸ್‌ಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹಾವೇರಿ ಇದ್ದು, 389 ಪ್ರಕರಣ ಪತ್ತೆಯಾಗಿವೆ. ಮೈಸೂರಿನಲ್ಲಿ 358, ಚಿಕ್ಕಮಗಳೂರಲ್ಲಿ 346, ಕಲಬುರಗಿಯಲ್ಲಿ 153 ಡೆಂಘೀ ಪ್ರಕರಣಗಳು ದೃಢಪಟ್ಟಿದ್ದವು.
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬಂದು ನಿಂತ ಬೆನ್ನಲ್ಲೇ ಸಾಲು ಸಾಲು ಅನಾಹುತಗಳ ಜತೆ ಡೆಂಘೀ ಪ್ರಕರಣಗಳ ಸಂಖ್ಯೆ ಕೂಡ ಅಧಿಕವಾಗಿವೆ. ಮೇ ತಿಂಗಳಲ್ಲಿ 1,002 ಡೆಂಘೀ ಪ್ರಕರಣ ಕಂಡು ಬಂದಿದ್ದವು. ಈ ಸಂಖ್ಯೆ 1,230ಕ್ಕೆ ಏರಿಕೆಯಾಗಿದೆ. ಕಳೆದ 20 ದಿನಗಳಲ್ಲಿ 230 ಹೊಸ ಡೆಂಘೀ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಇದೇ ಅವಧಿಗೆ 730 ಡೆಂಘೀ ಪ್ರಕರಣಗಳು ವರದಿಯಾಗಿದ್ದವು. ರಾಜಧಾನಿಯಲ್ಲಿ ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ.
ಸೋಂಕು ಇನ್ನಷ್ಟು ಹೆಚ್ಚಾದರೆ ಜನರಿಗೆ ಚಿಕಿತ್ಸೆ ಸಿಗುವುದು ಕಷ್ಟವಾಗಬಹುದಾಗಿದೆ. ಬಿಬಿಎಂಪಿ, ಡೆಂಘೀ ನಿಯಂತ್ರಿಸುವ ಸಂಬಂಧ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೆಲವು ಕಡೆ ಸೋಂಕು ಹೆಚ್ಚಳವಾಗುತ್ತಿದೆ. ಎಲ್ಲೆಲ್ಲಿ ಡೆಂಘೀ ಪ್ರಕರಣಗಳು ವರದಿಯಾಗುತ್ತಿವೆಯೋ ಅಲ್ಲಿ ಲಾರ್ವಾ ಉತ್ಪಾದನೆ ತಡೆಯಲು ಫಾಗಿಂಗ್ ಕೆಲಸ ತೀವ್ರಗೊಳಿಸಿದೆ. ಡೆಂಘೀ ಬಗ್ಗೆ ಅರಿವು ಮೂಡಿಸುವ ಸಂಬಂಧ ಪ್ರಚಾರ ಕೂಡ ಮಾಡುತ್ತಿದೆ. ನೀರು ನಿಂತ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಕಾರ್ಯ ಕೂಡ ನಡೆಸಲಾಗುತ್ತಿದೆ.