ಬೆಂಗಳೂರು: ಹೋಟೆಲ್ಗೆ ನುಗ್ಗಿ ಮಾಲೀಕನಿಗೆ ಮೂವರು ಚಾಕು ತೋರಿಸಿ ಬೆದರಿಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಹೋಟೆಲ್ಗೆ ಪ್ರವೇಶಿಸಿದ್ದ ಮೂವರು ಅಪರಿಚಿತರು ಕ್ಷುಲ್ಲಕ ಕಾರಣಕ್ಕಾಗಿ ಹೋಟೆಲ್ ಮಾಲೀಕರೊಂದಿಗೆ ದುಂಡಾವರ್ತನೆ ತೋರಿದ್ದಾರೆ. ಕೆಲ ಕಾಲ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಪುಂಡನೋರ್ವ ಚಾಕು ತೋರಿಸಿ ಬೆದರಿಸಿದ್ದಾನೆ.
ಯಾವ ಕಾರಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ತಿಳಿದುಬಂದಿಲ್ಲ. ಈ ಘಟನೆಯ ದೃಶ್ಯ ಹೋಟೆಲ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿಶಾಲ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ ನಗರ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ತಮ್ಮ ನೋವನ್ನು ತಿಳಿಸಿದ್ದಾರೆ.