ಬೆಂಗಳೂರು ಗ್ರಾಮಾಂತರ/ರಾಮನಗರ:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿಯ ಕಣವಾಗಿತ್ತು. ಮೈತ್ರಿ ಅಭ್ಯರ್ಥಿಯಾದ ಡಾ.ಸಿ.ಎನ್. ಮಂಜುನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಾದ್ಯಂತ ಸಮಬಲ ಹೋರಾಟ ನಡೆಸಿರುವ ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಗೆಲ್ಲುತ್ತಾರೆಂಬ ಭಾರಿ ಲೆಕ್ಕಾಚಾರ ಕ್ಷೇತ್ರದಾದ್ಯಂತ ಭಾರೀ ಬಿರುಸಿನಿಂದ ನಡೆಯುತ್ತಿದೆ.
ಬೆಟ್ಟಿಂಗ್ ಭರಾಟೆ: ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಮಬಲ ಹೋರಾಟ ಇರುವುದರಿಂದ ಬೆಟ್ಟಿಂಗ್ ಭರಾಟೆ ಕೂಡ ಜೋರಾಗಿದೆ. ತಮ್ಮ ಅಭ್ಯರ್ಥಿಗಳ ಪರ ಚನ್ನಪಟ್ಟಣ, ಕನಕಪುರ, ರಾಮನಗರ ಹಾಗೂ ಮಾಗಡಿ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ರಾಜಕೀಯ ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಮೂಲತಃ ಕೃಷಿಕ ಹಾಗೂ ನಂತರ ವ್ಯಾಪಾರೋದ್ಯಮಿಯಾಗಿ ಬೆಳೆದ ಡಿ.ಕೆ. ಸುರೇಶ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2013 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಉಪ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 2014 ಹಾಗೂ 2019 ರಲ್ಲಿ ಜಯ ಸಾಧಿಸಿದ್ದಾರೆ. ಈಗ ನಾಲ್ಕನೇ ಬಾರಿ ಕಠಿಣ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವುದರಿಂದ ಗೆಲ್ಲಬಹುದು. ಅಲ್ಲದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಮಹಿಳಾ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಇವರಿಗೆ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿರುವ ಖ್ಯಾತ ವೈದ್ಯರಾದ ಡಾ.ಮಂಜುನಾಥ್ ಅವರು ಪ್ರತಿಸ್ಪರ್ಧಿಯಾಗಿದ್ದಾರೆ. ಮಾಜಿ ದೇವೇಗೌಡರ ಅಳಿಯನಾಗಿರುವ ಇವರು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಜೊತೆಗೆ ಇಲ್ಲಿ ಜೆಡಿಎಸ್ ಮತಗಳು ಬಿಜೆಪಿ ಜೊತೆ ಸೇರುವುದರಿಂದ ಕಾಂಗ್ರೆಸ್ ಗೆಲುವು ಕಷ್ಟ ಆಗಬಹುದು ಎಂದು ಹೇಳಲಾಗುತ್ತಿದೆ.