ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವರುಣನ ಸಿಡಿಲಬ್ಬರ: ಅಕ್ಟೋಬರ್ ತಿಂಗಳಲ್ಲಿ 245 ಎಂ.ಎಂ ದಾಖಲೆ ಮಳೆ - BENGALURU RAINS

ಬೆಂಗಳೂರಿನಲ್ಲಿ ಇದೇ ಅಕ್ಟೋಬರ್ ತಿಂಗಳಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ ಎಂದು ಸಿಎಂ ಸಚಿವಾಲಯ ಮಾಹಿತಿ ನೀಡಿದೆ.

BENGALURU RAINS
ಮಳೆಯಲ್ಲಿಯೇ ಚಲಿಸುತ್ತಿರುವ ವಾಹನ ಸವಾರರು (IANS)

By ETV Bharat Karnataka Team

Published : Oct 23, 2024, 6:58 AM IST

ಬೆಂಗಳೂರು: ಬೆಂಗಳೂರುಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಎಂ.ಎಂ ದಾಖಲೆಯ ಮಳೆಯಾಗಿದೆ. ನಗರದ ಚೌಡೇಶ್ವರಿ ನಗರದಲ್ಲಿ 160 ಎಂ.ಎಂ ಮಳೆಯಾಗಿದ್ದು, ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ.

ಬೆಂಗಳೂರಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಸುತ್ತಿದೆ. ನಗರದ ವಿವಿಧ ಪ್ರತಿಷ್ಟಿತ ಅಪಾರ್ಟ್ಮೆಂಟ್, ಬಡಾವಣೆಗಳು ಜಲದಿಗ್ಬಂಧನಕ್ಕೆ ಒಳಗಾಗಿ ಜನರು ಪರದಾಡುವಂತಾಗಿದೆ. ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದಲ್ಲಿ ಕಳೆದ 72 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಯಲ್ಲಿ ಹೆಚ್ಚು ನೀರು ಹರಿದು ರಾಜಕಾಲುವೆಗಳಿಗೆ ಬರುತ್ತಿರುವ ಕಾರಣ ವಿವಿಧ ಪ್ರದೇಶಗಳು ಜಲಾವೃತವಾಗಿವೆ. ಚೌಡೇಶ್ವರಿ ನಗರದಲ್ಲಿ 160 ಎಂ.ಎಂ ಮಳೆಯಾಗಿದ್ದು, ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ ಎಂದು ಸಿಎಂ ಸಚಿವಾಲಯ ಮಾಹಿತಿ ನೀಡಿದೆ.

ನಗರದಲ್ಲಿ ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ಮೂರ್ನಾಲ್ಕು ದಿನಗಳಿಂದ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಪಾಲಿಕೆ, ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ಅಗ್ನಿ ಶಾಮಕದಳದ ತಂಡಗಳು 24/7 ಕಾರ್ಯನಿರ್ವಹಿಸುತ್ತಿವೆ. ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ.

ಕೇಂದ್ರಿಯ ವಿಹಾರದಲ್ಲಿ 600 ಕುಟುಂಬಸ್ಥರ 2,500 ನಿವಾಸಿಗಳಿಗೆ ಸ್ಥಳಾಂತರಿಸಲಾಗಿದೆ. 5 ಲೀಟರ್ ಸಾಮರ್ಥ್ಯದ 3,500 ನೀರಿನ ಬಾಟಲ್​​ಗಳನ್ನು ಹಂಚಿಕೆ ಮಾಡಲಾಗಿದೆ. 1,000 ಲೀಟರ್ ಹಾಲು ಹಾಗೂ 2,000 ಬಿಸ್ಕೆಟ್ ಪ್ಯಾಕೆಟ್ ವಿತರಿಸಲಾಗಿದೆ. 1,000 ತಿಂಡಿ ಪ್ಯಾಕೆಟ್, 6,600 ಊಟದ ಪ್ಯಾಕೆಟ್ ವಿತರಿಸಲಾಗಿದೆ. ಯಲಹಂಕ ವಲಯದ 4 ಪ್ರದೇಶಗಳನ್ನು ಹೊರತುಪಡಿಸಿ ಬೆರೆಡೆ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಲಾಗಿದೆ.

ನೀರು ನಿಂತಿರುವ ಪ್ರದೇಶಗಳ ವಿವರ:ಯಲಹಂಕ ವಲಯದಲ್ಲಿ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್, ರಮಣಶ್ರೀ ಕ್ಯಾಲಿಫೋರ್ನಿಯಾ, ಚಿತ್ರಕೂಟ ಅಪಾರ್ಟೆಂಟ್, ಬದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಸುರಭಿ ಲೇಔಟ್, ಸೋಮೇಶ್ವರ ಬಡಾವಣೆ, ತಿಂಡ್ಲು ರಸ್ತೆಯ ಬಸವ ಸಮಿತಿ, ಟಾಟಾ ನಗರ, ಚಿಕ್ಕ ಬೊಮ್ಮಸಂದ್ರ, ಆಂಜನೇಯ ಲೇಔಟ್, ವಾಯುನಂದನ ಲೇಔಟ್, ಫಾತಿಮ ಲೇಔಟ್, ಎಂ.ಎಸ್.ಪಾಳ್ಯ, ಯರಪ್ಪ ಗಾರ್ಡನ್, ಅಂಬೇಡ್ಕರ್ ಕಾಲೋನಿ, ಮಹದೇವಪುರ ವಲಯದಸಾಯಿ ಬಾಬಾ ಲೇಔಟ್, ವಡ್ಡರ ಪಾಳ್ಯ, ಹೊರಮಾವು ಮಾರತಹಳ್ಳಿ, ಆರ್.ಬಿ.ಡೈ ರೈಂಬೋ ಲೇಔಟ್, ಕೊತ್ತನೂರು-ಬಾಲಾಜಿ ಲೇಔಟ್, ವಿಪ್ರೋ ಪ್ರದೇಶ, ಸರ್ಜಾಪುರ ರಸ್ತೆ, ದಾಸರಹಳ್ಳಿ ವಲಯದ ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಪಾರ್ವತಿ ಲೇಔಟ್, ಮಿತ್ತಾ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಬೆಲ್‌ಮಾರ್ಗ್ ಲೇಔಟ್​ ಸೇರಿದಂತೆ ಹಲವೆಡೆ ನೀರು ಸಂಗ್ರಹಗೊಂಡಿದೆ.

ಮಳೆಯಿಂದಾಗಿ ಉಂಟಾದ ಪ್ರಮುಖ ಸಮಸ್ಯೆಗಳು:

  • ನೀರು ನುಗ್ಗಿರುವ ಮನೆಗಳ ಸಂಖ್ಯೆ : 1079
  • ನೀರು ನಿಂತಿರುವ ಪ್ರದೇಶಗಳ ಸಂಖ್ಯೆ : 30
  • ಮರ ಹಾಗೂ ರೆಂಬೆ-ಕೊಂಬೆ ಬಿದ್ದಿರುವ ಸಂಖ್ಯೆ : 199

ಪರಿಹಾರ ತಂಡಗಳ ನಿಯೋಜನೆ ವಿವರ:

  • ಎನ್​ಡಿಆರ್​ಎಫ್​ ತಂಡ : 1 ಬೆಟಾಲಿಯನ್​​
  • ಎಸ್​​ಡಿಆರ್​ಎಫ್​ ತಂಡ : 3
  • ಅರಣ್ಯ ವಿಭಾಗದ ತಂಡ : 30
  • ಅಗ್ನಿ ಶಾಮಕದಳ: 5
  • ಪಾಲಿಕೆ ಅಧಿಕಾರಿ/ಸಿಬ್ಬಂದಿ ತಂಡ : 30
  • ಸ್ಥಳಾಂತರಿಸಲು ಬೋಟ್‌ಗಳ ನಿಯೋಜನೆ : 16
  • ನೀರು ಹೊರ ಹಾಕಲು ಬಳಸಲಾಗುತ್ತಿರುವ ಪಂಪ್​ಸೆಟ್​ಗಳ ಸಂಖ್ಯೆ: 25 (15 ರಿಂದ 25 ಹೆಚ್​ಪಿ ಸಾಮರ್ಥ್ಯ)
  • ನೀರುಗಾಲುವೆಗಳ ಪ್ರಮುಖ ಸ್ಥಳಗಳಲ್ಲಿ ಹೂಳೆತ್ತಿ, ಸ್ವಚ್ಛಗೊಳಿಸುತ್ತಿರುವ ಜೆಸಿಬಿಗಳ ಸಂಖ್ಯೆ : 30

ಇದನ್ನೂ ಓದಿ:ಬೆಂಗಳೂರಲ್ಲಿ ಮಳೆಗೆ ಕುಸಿದ ನಿರ್ಮಾಣ ಹಂತದ ಕಟ್ಟಡ; ಓರ್ವ ಸಾವು, ಅವಶೇಷಗಳಡಿ 7 ಕಾರ್ಮಿಕರು - ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details