ಬೆಂಗಳೂರು:ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತು. ಅದರ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಯೂ ಹಸುಗಳನ್ನು ಕರೆತಂದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ, ಬಿಜೆಪಿ ಕಾರ್ಯಕರ್ತರು ವಿಧಾನಸೌಧ ಮುತ್ತಿಗೆಗೆ ಯತ್ನ ನಡೆಸಿದರು. ಆದರೆ ಮಾನವ ಹಕ್ಕುಗಳ ರಕ್ಷಣೆ ಜನ ಸೇವಾ ಸಮಿತಿ ಸದಸ್ಯರು ಪ್ರತಿಭಟನೆಗೆ ಹಸುಗಳ ಬಳಕೆ ಆಕ್ಷೇಪಿಸಿದ್ದರಿಂದ ಸ್ಥಳದಲ್ಲಿ ಹೈಡ್ರಾಮಾವೇ ನಡೆಯಿತು.
ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಮಹಾನಗರ ಘಟಕದಿಂದ ಹಸುಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು. ಹಸುಗಳ ಕೊರಳಿಗೆ ಧಿಕ್ಕಾರ ಅಂತ ಬರೆದಿರುವ ಪ್ಲೆ ಕಾರ್ಡ್ಗಳನ್ನು ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
716 ಕೋಟಿ ರೂ. ಹಾಲಿನ ಬಾಕಿ ಪ್ರೋತ್ಸಾಹ ಹಣ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಹೊರಟರು. ಈ ವೇಳೆ, ಪ್ರತಿಭಟನಾಕಾರರಿಗೆ ಪೊಲೀಸರು ತಡೆ ಒಡ್ಡಿದರು. ಹಸುಗಳ ಸಮೇತ ಮುತ್ತಿಗೆ ಯತ್ನಕ್ಕೆ ಬ್ರೇಕ್ ಹಾಕಿದರು. ಫ್ರೀಡಂ ಪಾರ್ಕ್ನಲ್ಲಿಯೇ ಪ್ರತಿಭಟನೆ ನಡೆಸಬೇಕು ಎಂದು ಸೂಚಿಸಿದರು. ಅದರಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಫ್ರೀಡಂ ಪಾರ್ಕ್ನಲ್ಲಿ ಹೈಡ್ರಾಮಾ ನಡೆಯಿತು.
ಬಿಜೆಪಿ ಪ್ರತಿಭಟನೆಯಲ್ಲಿ ಹಸುಗಳನ್ನು ಕರೆತಂದಿದ್ದಕ್ಕೆ ಮಾನವ ಹಕ್ಕುಗಳ ರಕ್ಷಣೆ ಜನ ಸೇವಾ ಸಮಿತಿ ಕಡೆಯಿಂದ ಮೂವರು ವ್ಯಕ್ತಿಗಳು ಆಕ್ಷೇಪಿಸಿದರು. ಹಸುಗಳನ್ನು ಕರೆತಂದಿದ್ದ ಪ್ರತಿಭಟನಾನಿರತ ರೈತರ ಬಳಿ ತೆರಳಿ ಪ್ರತಿಭಟಿಸಿದರು. ಪ್ರತಿಭಟನೆಗೆ ಹಸುಗಳನ್ನು ತಂದಿದ್ದು ಸರಿಯಲ್ಲ. ಹಸುಗಳ ಬಳಕೆ ನಿಷಿದ್ಧ ಎಂದರು. ಈ ವೇಳೆ, ಸಮಿತಿ ಸದಸ್ಯರ ವರ್ತನೆಯಿಂದ ರೊಚ್ಚಿಗೆದ್ದ ಪ್ರತಿಭಟನಾಕಾರು ಸಮಿತಿ ಸದಸ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಸದಸ್ಯರ ನಡೆಗೆ ಸಿಟ್ಟಾಗಿ ಸ್ಥಳದಿಂದ ಓಡಿಸಲು ಮುಂದಾದರು. ಈ ವೇಳೆ ನೂಕಾಟ, ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು. ನಂತರ ಸಮಿತಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಹೊರಗೆ ಕಳುಹಿಸಿದರು. ಬಳಿಕ ಹಸುಗಳೊಂದಿಗೆ ವಿಧಾನಸೌಧ ಮುತ್ತಿಗೆ ಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ಮುಂದಾದರು. ಈ ವೇಳೆ, ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಮತ್ತು ರೈತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಬೇರೆಡೆಗೆ ಕರೆದೊಯ್ದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಚಾರ್ಟರ್ ವಿಮಾನದಲ್ಲಿ ದೆಹಲಿಗೆ ಜಮೀರ್ ಅಹ್ಮದ್ ಅವರ ಜೊತೆ ತೆರಳುವ ಮುಖ್ಯಮಂತ್ರಿಗಳು, ಈ ಸರ್ಕಾರಕ್ಕೆ ಹಾಲಿನ ಪ್ರೋತ್ಸಾಹಧನ ನೀಡಲು ಮನುಷ್ಯತ್ವ ಇಲ್ಲ. ಹಾಗಾಗಿ ಈ ದನಗಳನ್ನು ತೆಗೆದುಕೊಂಡು ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಸರ್ಕಾರದ ಗಮನ ಸೆಳೆಯಬೇಕಾಯಿತು ಎಂದು ತಿಳಿಸಿದರು.
ಸರ್ಕಾರದ ವಿರುದ್ಧ ಆಕ್ರೋಶ:ಸರಕಾರದ ವಿರುದ್ಧ ಜಾನುವಾರುಗಳು ತಿರುಗಿ ಬಿದ್ದಿವೆ. ಜಾನುವಾರುಗಳಿಗೆ ಪಶು ಆಸ್ಪತ್ರೆಗಳಿಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಪಶು ಆಸ್ಪತ್ರೆಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಮುಖಾಂತರ ಬೆಂಗಳೂರಿನಲ್ಲಿ ಹಾಲು ಉತ್ಪಾದಕರೂ ಇರಬಾರದು; ಹಾಲು ಕೊಡುವ ಗೋವುಗಳೂ ಇರಬಾರದು ಎಂಬ ಗೋ ವಿರೋಧಿ ಸರಕಾರ ರಾಜ್ಯದ್ದು ಎಂದು ಆರೋಪಿಸಿದರು.