ಬೆಂಗಳೂರು:2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ, ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಬದಲಾವಣೆಗೆ ಯತ್ನಿಸಿದ ಆರೋಪದ ಮೇಲೆ ಐವರು ಹಲಸೂರು ಗೇಟ್ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ.ಅಫ್ಜಲ್ ಹುಸೇನ್ (29), ಪಾಂಡಿಚೇರಿ ಮೂಲದ ಪ್ರಸೀತ್ (47), ಕೇರಳ ಮೂಲದ ಮೊಹಮ್ಮದ್ ಅಫ್ನಾಸ್ (34), ನೂರುದ್ದೀನ್ ಅಲಿಯಾಸ್ ಅನ್ವರ್ (34) ಹಾಗೂ ಪ್ರಿಯೇಶ್ (34) ಬಂಧಿತರು. ಆರೋಪಿಗಳಿಂದ 52.40 ಲಕ್ಷ ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಬಳ್ಳಾರಿ ಮೂಲದ ಆರೋಪಿ ಅಫ್ಜಲ್ ಹುಸೇನ್ ಸೆ.9ರಂದು ನೃಪತುಂಗ ರಸ್ತೆಯ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಬಂದಿದ್ದು, 2 ಸಾವಿರ ರೂ. ಮುಖಬೆಲೆಯ 24.68 ಲಕ್ಷ ರೂ. ಹಣವನ್ನು 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾವಣೆ ಮಾಡಲು ಮುಂದಾಗಿದ್ದ. ಈ ವೇಳೆ, ಆರ್‌ಬಿಐ ಅಧಿಕಾರಿಗಳು ಈ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ನೈಜತೆ ಪರೀಕ್ಷಿಸಿದಾಗ ಅವು ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ.
ಈ ಸಂಬಂಧ ಆರ್‌ಬಿಐ ಬ್ಯಾಂಕಿನ ಎಜಿಎಂ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಫ್ಜಲ್ ಹುಸೇನ್‌ನನ್ನು ಬಂಧಿಸಿ ವಿಚಾರಿಸಿದಾಗ ನಕಲಿ ನೋಟು ದಂಧೆ ಬಯಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರು ಆರೋಪಿಗಳನ್ನು ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, 27.72 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.