ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ನಕ್ಲೇಸ್ ಧರಿಸಿ, ವಾಟ್ಸ್‌ಆ್ಯಪ್ ಡಿಪಿಗೆ ಹಾಕಿ ಮಹಿಳೆಯೊಬ್ಬಳು ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹೊಸಪೇಟೆ ಮೂಲದ ರೇಣುಕಾ (38) ಎಂಬಾಕೆಯನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದು, 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಕಳೆದ 18 ವರ್ಷಗಳಿಂದ ಮಾರತ್ ಹಳ್ಳಿಯ ಮುನೆಕೋಳಲಿನಲ್ಲಿ ಪತಿ-ಮಕ್ಕಳೊಂದಿಗೆ ಆರೋಪಿ ನೆಲೆಸಿದ್ದಳು. ಪತಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಅಪಾರ್ಟ್ಮೆಂಟ್ವೊಂದರಲ್ಲಿ ಮನೆಗೆಲಸ ಮಾಡುತ್ತಿದ್ದಳು. ತಾನು ಕೆಲಸ ಮಾಡುತ್ತಿದ್ದ ಪ್ಲ್ಯಾಟ್ವೊಂದರಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಅನುಮಾನದ ಮೇರೆಗೆ ಆರೋಪಿತೆಯನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಆಗ ಕೃತ್ಯದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಿದ್ದಳು.
ಇದಾದ ಕೆಲ ದಿನಗಳ ನಂತರ ಇದೇ ಮಹಿಳೆ, ಕಳ್ಳತನವಾಗಿದ್ದ ಒಡವೆ ಧರಿಸಿ ವಾಟ್ಸ್‌ಆ್ಯಪ್ ಡಿಪಿ ಹಾಕಿದ್ದಳು. ಈ ಫೋಟೋದಲ್ಲಿ ಮಹಿಳೆಯ ಪತಿ ಕೂಡ ಇದ್ದು, ಆತನೂ ಕಳ್ಳತನವಾಗಿದ್ದ ಉಂಗುರ ಹಾಕಿಕೊಂಡಿದ್ದ. ಈ ಫೋಟೋ ನೋಡಿದ ಮನೆ ಮಾಲೀಕರು, ಆರೋಪಿತೆ ಧರಿಸಿರುವ ನಕ್ಲೇಸ್ ತನ್ನದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿತೆಯನ್ನು ಕರೆಯಿಸಿ ಫೋಟೊ ತೋರಿಸಿದಾಗ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇದೇ ರೀತಿ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಬಂಧಿತೆಯಿಂದ 80 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 32 ಪ್ರಕರಣಗಳ ಖತರ್ನಾಕ್ ಕಳ್ಳ ಅರೆಸ್ಟ್: ಸಾಹಸ ತೋರಿದ ಕಾನ್ಸ್ಟೇಬಲ್ಗೆ ಮೆಚ್ಚುಗೆ - Thief arrest
ವೃತ್ತಿಯಲ್ಲಿ ಕ್ಯಾಬ್ ಡ್ರೈವರ್, ಪ್ರವೃತ್ತಿಯಲ್ಲಿ ಖದೀಮ: 90 ಗ್ರಾಂ ಚಿನ್ನ ವಶಕ್ಕೆ ಪಡೆದು ಬಾಣಸವಾಡಿ ಪೊಲೀಸರು
ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿ ಪ್ರವೃತ್ತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪಾರ್ಟ್ ಟೈಮ್ ಕಳ್ಳನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರೂ ಮೌಲ್ಯದ 90 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಸತೀಶ್ ಬಂಧಿತ ಆರೋಪಿ. ತಮಿಳುನಾಡಿನ ಮೂಲದ ಈತ ಕಾವಲ್ ಭೈರಸಂದ್ರದ ಯುವತಿಯನ್ನು ಮದುವೆಯಾಗಿದ್ದ. ಕ್ಯಾಬ್ ಡ್ರೈವರ್ ಕೆಲಸ ಮಾಡುವ ಆರೋಪಿ ಕಳ್ಳತನದ ಚಾಳಿ ಬೆಳೆಸಿಕೊಂಡಿದ್ದ. ತನ್ನ ಬಳಿಯಿದ್ದ ಪಲ್ಸರ್ ಬೈಕ್ನಲ್ಲಿ ನಗರದೆಲ್ಲೆಡೆ ಸುತ್ತಾಡಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ.
ಇತ್ತೀಚೆಗೆ ಕಲ್ಯಾಣನಗರದ ಹೆಚ್ಬಿಆರ್ ಬಡಾವಣೆಯ ಪ್ರಮೋದ್ ಭಟ್ ಎಂಬವರ ಮನೆಯಲ್ಲಿ ಕಳವು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಈ ಹಿಂದೆ ಅಮೃತಹಳ್ಳಿ, ಚಿಕ್ಕಜಾಲ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಈತ ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖದೀಮನ ಪತ್ತೆಗೆ 1,100 ನೋಂದಣಿ ಸಂಖ್ಯೆ ಶೋಧ:ಖದೀಮನನ್ನು ಬಂಧಿಸಲು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪರಿಶೀಲಿಸಿದಾಗ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬಂದಿರುವ ವ್ಯಕ್ತಿಯೇ ಕಳ್ಳತನ ಮಾಡಿರುವುದು ಸ್ಪಷ್ಟವಾಗಿತ್ತು. ನಂಬರ್ ಪ್ಲೇಟ್ ಸರಿಯಾಗಿ ಕಾಣದಿದ್ದರಿಂದ ಆರ್ಟಿಒ ಅಧಿಕಾರಿಗಳ ನೆರವು ಪಡೆದುಕೊಂಡಿದ್ದರು. ಬಂಧನದಿಂದ ಪಾರಾಗಲು ಆರೋಪಿ ಬೈಕ್ ನಂಬರ್ ತಿದ್ದಿದ್ದಾನೆ. ಆರಂಭದಲ್ಲಿ ಇದನ್ನರಿಯದ ಪೊಲೀಸರು, ಆರ್ಟಿಒ ಮೂಲಕ ಸುಮಾರು 1,100 ನಂಬರ್‌ಗಳನ್ನು ಪರಿಶೀಲಿಸಿದ್ದರು. ಖಚಿತ ಮಾಹಿತಿ ಮೇರೆಗೆ ಬೈಕ್ ಚಾಲಕನನ್ನು ಪತ್ತೆ ಹಚ್ಚಿ ಪ್ರಶ್ನಿಸಿದಾಗ ಶೋ ರೂಂನಿಂದ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿರುವುದಾಗಿ ಮಾಹಿತಿ ನೀಡಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:38 ಮನೆಗಳ್ಳತನ ಪ್ರಕರಣ: ಗೆಳೆಯ, ಗೆಳತಿ ಬಂಧನ, ₹45 ಲಕ್ಷ ಮೌಲ್ಯದ ಆಭರಣ ವಶಕ್ಕೆ - House Burglary Case