ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿ ಆದೇಶ ಹೊರಡಿಸಿದ್ದು ಅನಗತ್ಯ, ಅವೈಜ್ಞಾನಿಕ: ಪಿ ಸಿ ರಾವ್ ಬೆಂಗಳೂರು: ಫೆಬ್ರುವರಿ 16ರಂದು ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆಯ ದಿನದಂದು ಪೊಲೀಸ್ ಇಲಾಖೆಯವರು ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿ ಆದೇಶ ಹೊರಡಿಸಿದ್ದು ಅನಗತ್ಯ ಹಾಗೂ ಅವೈಜ್ಞಾನಿಕವಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.
ಕೇವಲ 10 ಸಾವಿರ ಮಹಿಳೆಯರು ಹಾಗೂ 6 ಸಾವಿರ ಪುರುಷರಿರುವ ಒಂದೇ ಒಂದು ಶಿಕ್ಷಣ ಕೇತ್ರಕ್ಕೆ ನಡೆಯುವ ಚುನಾವಣೆಗೆ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ 3,600ಕ್ಕೂ ಹೆಚ್ಚು ಅಂಗಡಿಗಳನ್ನು ಫೆಬ್ರುವರಿ 14, 15, 16 ಮತ್ತು 20ರಂದು ಕಾಲ ಮುಚ್ಚಲು ಆದೇಶ ಹೊರಡಿಸಿರುವುದು ಸಮಂಜಸವಲ್ಲ. ಇದರಿಂದ 450 ಕೋಟಿಗೂ ಹೆಚ್ಚು ವ್ಯವಹಾರ ಸ್ಥಗಿತಗೊಳ್ಳುವುದಲ್ಲದೆ, ಸರ್ಕಾರಕ್ಕೂ 240 ಕೋಟಿಯಷ್ಟು ತೆರಿಗೆಯ ಕೊರತೆಯಾಗುತ್ತದೆ. ಇದನ್ನು ಹೊರತುಪಡಿಸಿ ಇಂದು ಪ್ರೇಮಿಗಳ ದಿನವಾಗಿದ್ದರಿಂದ ಎಲ್ಲ ರೀತಿಯ ತಯಾರಿಗಳನ್ನು ನಡೆಸಲಾಗಿತ್ತು ಎಂದಿದ್ದಾರೆ.
'ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿ ಆದೇಶ ಹೊರಡಿಸಿದ್ದು ಅನಗತ್ಯ, ಅವೈಜ್ಞಾನಿಕ' ಇವೆಲ್ಲಾ ಕಾರಣಗಳಿಂದ ಈಗಾಗಲೇ ಹೊರಡಿಸಿರುವ ಆದೇಶವನ್ನು ಪುನರ್‌ಪರಿಶೀಲಿಸಬೇಕೆಂದು ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಸರಿಯಾದ ಪುರಸ್ಕಾರ ಸಿಗದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದೆವು. ಹಿರಿಯ ವಕೀಲರಾದ ಅರುಣ್ ಶ್ಯಾಮ ನಮ್ಮ ಪರವಾಗಿ ಮಂಡಿಸಿ ನ್ಯಾಯಾಧೀಶರಿಗೆ ಮನವರಿಕೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಧೀಶರು ವಾದ ಪ್ರತಿವಾದಗಳನ್ನು ಆಲಿಸಿ ದಿನಾಂಕ 16 (ಚುನಾವಣೆಯ ದಿನ) ಹಾಗೂ ದಿನಾಂಕ 20 (ಚುನಾವಣಾ ಫಲಿತಾಂಶದ ದಿನ) ಮಾತ್ರ ಮದ್ಯ ಮಾರಾಟ ಬಂದ್ ಮಾಡಬೇಕೆಂಬ ಆದೇಶ ಹೊರಡಿಸಿದ್ದಾರೆ. ಇದು ನಮ್ಮ ಪ್ರಯತ್ನಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಚಂದ್ರಶೇಖರ್, ನಾಸೀರ್, ಮಾಕೇನ್ಗೆ ಕಾಂಗ್ರೆಸ್ ಟಿಕೆಟ್