ಬೆಂಗಳೂರು:ತುರ್ತು ಸಂದರ್ಭಗಳಲ್ಲಿ ನೆರವಾಗಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದು, ಕೆಎಸ್ಪಿ ಮೊಬೈಲ್ ಆ್ಯಪ್‌ಗೆ 'ಸೇಫ್ ಕನೆಕ್ಟ್'ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಅಪಾಯದ ಸಂದರ್ಭಗಳಲ್ಲಿ ಜನರು ಆ್ಯಪ್ನಲ್ಲಿರುವ ಸುರಕ್ಷಿತ ಬಟನ್ ಒತ್ತಿ ಕರೆ ಮಾಡಿದರೆ, ತಕ್ಷಣವೇ ಕರೆ ಮಾಡಿದ ಸ್ಥಳದ ಲೈವ್ ಲೊಕೇಶನ್ ಕಮಾಂಡ್ ಸೆಂಟರ್ಗೆ ರವಾನೆಯಾಗುತ್ತದೆ.
ಈ ಹಿಂದೆ ನಗರದ ಹಲವೆಡೆ ನಿರ್ಮಿಸಲಾಗಿದ್ದ ಸೇಫ್ಟಿ ಐಲ್ಯಾಂಡ್‌ನಲ್ಲಿ ಸೇಫ್ಟಿ ಬಟನ್ ಒತ್ತಿದ ತಕ್ಷಣ ನೇರವಾಗಿ ಕಮಾಂಡ್ ಸೆಂಟರ್ ಅನ್ನು ಸಂಪರ್ಕಿಸುತ್ತಿತ್ತು. ಲೊಕೇಷನ್ ಆಧರಿಸಿ ಕೆಲವೇ ಕ್ಷಣಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜನರ ದೂರುಗಳನ್ನು ಆಲಿಸುತ್ತಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ನಗರ ಪೊಲೀಸರು, ಪ್ರಚಲಿತದಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಆ್ಯಪ್‌ಗೆ ಸೇಫ್ ಕನೆಕ್ಟ್ ಬಟನ್ ಸೇರಿಸಿದ್ದಾರೆ.
ಸಂಕಷ್ಟ ಸಂದರ್ಭಗಳಲ್ಲಿ ಈ ಸೇಫ್ ಕನೆಕ್ಟ್ ಬಟನ್ ಒತ್ತಿದರೆ ನೇರವಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಡಿಯೊ ಅಥವಾ ಆಡಿಯೊ ಕರೆ ಮಾಡಬಹುದು. ಈ ಮೂಲಕ ಸ್ವಯಂಚಾಲಿತವಾಗಿ ನೀವಿರುವ ಸ್ಥಳವನ್ನು ಪತ್ತೆ ಹಚ್ಚಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಸಹಾಯಕ್ಕೆ ಹೊಯ್ಸಳ ಸಿಬ್ಬಂದಿ ಧಾವಿಸುತ್ತಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, "ಸೇಫ್ ಸಿಟಿ ಯೋಜನೆಯಡಿ ನಗರದೆಲ್ಲೆಡೆ ಈಗಾಗಲೇ ಸುಮಾರು 50 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲಾಗುವುದು. ಗರಿಷ್ಟ ಮಟ್ಟದಲ್ಲಿ ಜನರಿಗೆ ನೆರವಾಗುವ ಸಲುವಾಗಿ ಕೆಎಸ್ಪಿ ಆ್ಯಪ್ನಲ್ಲಿ ಸೇಫ್ ಕನೆಕ್ಟ್ ಬಟನ್ ಲಿಂಕ್ ಕೊಡಲಾಗಿದೆ".