ಬೆಂಗಳೂರು: 8 ವರ್ಷಗಳಿಂದ ನಕಲಿ ಸರ್ಕಾರಿ ದಾಖಲೆಗಳನ್ನ ಸೃಷ್ಟಿಸುವ ದಂಧೆ ನಡೆಸುತ್ತಿದ್ದ ಶ್ರೀಲಂಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ರಾಚೇನಹಳ್ಳಿಯ ಅಪಾರ್ಟ್‌ಮೆಂಟ್'ವೊಂದರಲ್ಲಿ ವಾಸವಿದ್ದ ಶರಣ್ ಕುಮಾರ್ ಕಾಳಿದಾಸ್ ಅಲಿಯಾಸ್ ಉಮೇಶ್ ಬಾಲ ರವೀಂದ್ರನ್ ಬಂಧಿತ ಆರೋಪಿ. ಬಂಧಿತನಿಂದ ಕಂಟ್ರಿ ಮೇಡ್ ಪಿಸ್ತೂಲ್, ನಕಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಡೆಬಿಟ್/ಕ್ರೆಡಿಟ್ ಕಾರ್ಡ್ಸ್ ಹಾಗೂ ಬ್ಯಾಂಕಿಂಗ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಸರ್ಕಾರಿ ದಾಖಲೆ ಸೃಷ್ಟಿಸುವ ದಂಧೆ: ಮೂಲತಃ ಶ್ರೀಲಂಕಾದವನಾಗಿರುವ ಆರೋಪಿ ಹಲವು ವರ್ಷಗಳ ಹಿಂದೆಯೇ ತಮಿಳುನಾಡಿನ ಚೆನ್ನೈಗೆ ಬಂದು ನಕಲಿ ಸರ್ಕಾರಿ ದಾಖಲೆ ಸೃಷ್ಟಿಸುವ ದಂಧೆ ನಡೆಸುತ್ತಿದ್ದನು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಬಳಿಕ ಆತನನ್ನು ತಮಿಳುನಾಡಿನಿಂದ ಗಡೀಪಾರು ಮಾಡಿ ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು. ಆದರೆ, 2016ರಲ್ಲಿ ಕಳ್ಳ ಮಾರ್ಗದಿಂದ ಪುನಃ ಭಾರತಕ್ಕೆ ಬಂದಿದ್ದ ಆರೋಪಿ ಕನಕಪುರ ರಸ್ತೆಯಲ್ಲಿ ವಾಸವಿದ್ದನು. ಬಳಿಕ ವಿಜಯನಗರ, ಥಣಿಸಂದ್ರ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಕಾಲ ವಾಸವಿದ್ದ ಆರೋಪಿ, 2021ರಲ್ಲಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಭಾರತಕ್ಕೆ ಕರೆಸಿಕೊಂಡಿದ್ದನು. ನಂತರ ರಾಚೇನಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದನು.
ಆರೋಪಿಯ ಅಕ್ರಮ ಚಟುವಟಿಕೆಗಳ ಕುರಿತು ಖಚಿತ ಮಾಹಿತಿ ಕಲೆಹಾಕಿದ್ದ ಸಿಸಿಬಿ ಪೊಲೀಸರು ಮೇ 20ರಂದು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪಿಯು, 'ತಮಿಳುನಾಡಿನ ಮೈಲದುತುರೈ ಮೂಲದವನು' ಎಂದು ಉತ್ತರಿಸಿದ್ದ. ಬಳಿಕ ಆತನ ವೃತ್ತಿಯ ಕುರಿತು ವಿಚಾರಿಸಿದಾಗ ಆರೋಪಿ ತನ್ನ ಅಕ್ರಮದ ಕುರಿತು ವಿವರಿಸಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.