ಬೆಂಗಳೂರು:ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸುಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ರಾಮಸ್ಮರಣೆ ಮಾಡುತ್ತಾ ರಾಮಭಕ್ತಿ ಮೆರೆಯುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾಫಿ ಕನೆಕ್ಷನ್ಸ್ ಓವನ್ ಫ್ರೆಷ್ ಕಾಫಿ ಶಾಪ್‌ನಲ್ಲಿ ಕಪ್ ಕಾಫಿಯಲ್ಲಿ ರಾಮ ಮಂದಿರ ಚಿತ್ರಿಸುತ್ತಿದ್ದಾರೆ.
ಇದಕ್ಕೆ ಹದಿನೈದು ದಿನಗಳಿಂದ ಪೂರ್ವಸಿದ್ಧತೆಯೂ ನಡೆದಿದೆ. ಕಪ್‌ನಲ್ಲಿರುವ ಕಾಫಿಯಲ್ಲಿ ರಾಮಮಂದಿರ ಮೂಡಿಸಲೆಂದೇ ಜಾತಿ, ಧರ್ಮ ಭೇದವಿಲ್ಲದೆ ಸಿಬ್ಬಂದಿಯಲ್ಲಿ ಕಲಾಸಕ್ತರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಪ್ರತಿದಿನ ಕಪ್ ಕಾಫಿಯಲ್ಲಿ ರಾಮಮಂದಿರ ಮೂಡಿಸಿ ಕಾಫಿಯನ್ನು ಪ್ರದರ್ಶನಕ್ಕಿಡಲಾಗಿದೆ. ರಾತ್ರಿ ಅದನ್ನು ಶುದ್ಧ ಸ್ಥಳದಲ್ಲಿ ಹಾಕಿ ಅಲ್ಲಿ ಗಿಡವೊಂದನ್ನು ನೆಡಲು ಕಾಫಿ ಶಾಪ್ ಮುಂದಾಗಿದೆ.
ಕಾಫಿ ಕನೆಕ್ಷನ್ಸ್ ಐಯ್ಯಂಗಾರ್ಸ್ ಓವನ್ ಫ್ರೆಷ್ ಕಾಫಿ ಶಾಪ್ ಸಂಸ್ಥಾಪಕ ಜೆ.ಕೆ.ಪ್ರಮೋದ್ ಈ ಕುರಿತು ಮಾತನಾಡಿ, "ವಿಶ್ವಕ್ಕೆ ಕೆಲವು ದಿಕ್ಸೂಚಿಗಳಿರುತ್ತವೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವುದೂ ಇಂತಹ ದಿಕ್ಸೂಚಿಗಳಲ್ಲಿ ಒಂದು. ರಾಮ ಒಂದು ಆತ್ಮವಿದ್ದಂತೆ. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಬಾರದು. ಈ ಹಿನ್ನೆಲೆಯಲ್ಲಿ ರಾಮನ ಕುರಿತು ಜನರಲ್ಲಿ ಅರಿವು ಮೂಡಿಸಲು ನಮ್ಮ ಕೆಫೆಯಲ್ಲಿ ಸಣ್ಣ ಪ್ರಯತ್ನ ಮಾಡಲಾಗಿದೆ" ಎಂದು ಹೇಳಿದರು.