ಬೆಂಗಳೂರು: ಕೇವಲ ಪ್ರಾಯೋಜಿತ ಗುಂಪು ತಮಗೆ ಟಿಕೆಟ್ ಬೇಕೆಂಬ ಕಾರಣಕ್ಕೆ ಏನೇನೋ ಮಾಡಿದರೂ ಅವರಿಂದ ಟಿಕೆಟ್ ತಗೊಂಡು ಬರಲು ಆಗಿಲ್ಲ. ಪಕ್ಷ ವಿರೋಧಿ, ಗಲಭೆ, ಅವಮಾನ ಮಾಡಿದವರಿಗೆ ಟಿಕೆಟ್ ಸಿಗಲ್ಲ ಅನ್ನೋದು ನನ್ನಿಂದ ಸಾಬೀತಾಗಿದೆ. ಇನ್ನಾದರೂ ಅವರು ಪಾಠ ಕಲಿಯಲಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಸಿ ಟಿ ರವಿಗೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಘೋಷಣೆ ಬೆನ್ನಲ್ಲೇ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾದರು. ಡಾಲರ್ಸ್ ಕಾಲೋನಿ ನಿವಾಸಕ್ಕೆ ತೆರಳಿ ಬಿಎಸ್ವೈ ಆಶೀರ್ವಾದ ಪಡೆದುಕೊಂಡರು. ನಂತರ ಕೆಲ ಕಾಲ ರಾಜಕೀಯ ವಿಚಾರದ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡರ ನಿವಾಸಕ್ಕೆ ತೆರಳಿದ ಶೋಭಾ ಕರಂದ್ಲಾಜೆ ಅವರಿಂದಲೂ ಆಶೀರ್ವಾದ ಪಡೆದುಕೊಂಡು ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿ, ಕೆಲ ಕಾಲ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರಂದ್ಲಾಜೆ, ದೆಹಲಿ ನಾಯಕರ ಮೇಲೆ ವಿಶ್ವಾಸ ಇತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಜವಾಬ್ದಾರಿ ವಹಿಸಿದ್ದರು. ಪಕ್ಷ ಮತ್ತು ಸರ್ಕಾರದಲ್ಲಿ ನನಗೆ ಸಿಕ್ಕ ಜವಾಬ್ದಾರಿಯನ್ನು ಶ್ರಮ ವಹಿಸಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಯಾವುದೇ ರಾಜ್ಯದ ಚುನಾವಣೆ ಆಗಲಿ, ಯಾವುದೇ ಇಲಾಖೆ ಆಗಲಿ ಇದೆಲ್ಲವನ್ನೂ ಪ್ರಾಮಾಣಿಕವಾಗಿ ಮಾಡಿದ್ದೆ. ಈ ಕಾರಣಕ್ಕೆ ನನ್ನ ನಾಯಕತ್ವವನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದಾರೆ ಎಂದರು.
ಉಡುಪಿ ಚಿಕ್ಕಮಗಳೂರಲ್ಲಿ ಬಹಳ ದೊಡ್ಡ ಅಭಿವೃದ್ಧಿ ಕೆಲಸ ಆಗಿದೆ. ಆದರೆ, ಅದನ್ನು ಪರಿಗಣಿಸದೇ ಕೆಲವರು ವಿರೋಧ ಮಾಡಿದ್ದರು. ಕೇವಲ ಪ್ರಾಯೋಜಿತ ಗುಂಪು ತಮಗೆ ಟಿಕೆಟ್ ಬೇಕೆಂಬ ಕಾರಣಕ್ಕೆ ಏನೇನೋ ಮಾಡಿತ್ತು. ಆದರೆ, ಅವರು ಯಶಸ್ವಿಯಾಗಿಲ್ಲ. ಅವರಿಂದಲೂ ಟಿಕೆಟ್ ತಗೊಂಡು ಬರೋಕೆ ಆಗಿಲ್ಲ. ಪಕ್ಷ ವಿರೋಧಿ, ಗಲಭೆ, ಅವಮಾನ ಮಾಡಿದವರಿಗೆ ಟಿಕೆಟ್ ಸಿಗಲ್ಲ ಅನ್ನೋದು ನನ್ನಿಂದ ಸಾಬೀತಾಗಿದೆ. ಇನ್ನಾದ್ರು ಇವರು ಪಾಠ ಕಲಿಯಲಿ, ಬಿಜೆಪಿ ಒಂದು ಶಿಸ್ತಿನ ಪಕ್ಷ ಎಂದು ಹೆಸರು ಹೇಳದೆ ಪರೋಕ್ಷವಾಗಿ ಸಿ ಟಿ ರವಿಗೆ ಟಾಂಗ್ ಕೊಟ್ಟರು. ಈ ರೀತಿ ಪಕ್ಷಕ್ಕೆ ಅವಮಾನ ಮಾಡಿದವರಿಗೆ ಮಣೆ ಹಾಕಲ್ಲ ಅಂತಾ ವರಿಷ್ಠರು ತೋರಿಸಿಕೊಟಿದ್ದಾರೆ. ಇದರಿಂದ ನನಗೆ ನಿಜಕ್ಕೂ ಆನಂದವಾಗಿದೆ ಎಂದರು.
ನಾನು ಯಶವಂತಪುರ ಶಾಸಕಿಯಾಗಿ, ಸಚಿವೆ ಆಗಿ ಕೆಲಸ ಮಾಡಿದ್ದೆ. ನಂತರ ಯಶವಂತಪುರದಲ್ಲಿ ಸೋಮಶೇಖರ್ ಗೆಲ್ಲಿಸಿದ್ದೆವು. ಅವರು ಮೋಸ ಮಾಡಿದ್ದಾರೆ. ಎಲ್ಲರ ಆಶೀರ್ವಾದ ನನಗಿದೆ. ಬೆಂಗಳೂರು ಉತ್ತರದಲ್ಲೂ ವಿರೋಧ ವ್ಯಕ್ತವಾದ ವಿಚಾರ ನೋಡಿದ್ದೇನೆ. ನೆಲಮಂಗಲದಲ್ಲಿ ವಿರೋಧ ಇದೆ. ಅವರಿಗೂ, ಇಲ್ಲಿಗೂ ಏನು ಸಂಬಂಧ? ಸಹಜವಾಗಿ ಉಡುಪಿ-ಚಿಕ್ಕಮಗಳೂರಿಗೆ ಕನೆಕ್ಟ್ ಆಗಿದ್ದೆ. ಅಲ್ಲಿ ಮಿಸ್ ಆಗಿದೆ. ಅದಕ್ಕೆ ಉಡುಪಿಯವರು ಕಾರಣ ಅಂತ ಹೇಳಲ್ಲ. ನನ್ನನ್ನು ಬೆಂಗಳೂರಿಗೆ ತರಬೇಕು ಅನ್ನೋದು ಹೈಕಮಾಂಡ್ ನಿರ್ಧಾರ ಆಗಿರಬಹುದು. ಆದರೂ ನಾನು ಅಲ್ಲಿ ಗೆಲ್ತಿದ್ದೆ. ಕಳೆದ ಬಾರಿ ಕೂಡ ಗೋ ಬ್ಯಾಕ್ ಕೂಗಿದ್ರು. ಆದ್ರೂ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿಯೂ ಉತ್ತಮ ಅಂತರದಿಂದ ಗೆಲ್ಲುತ್ತೇನೆ. ಉಡುಪಿ ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಕೂಡ ಅಭೂತಪೂರ್ವವಾಗಿ ಗೆಲ್ಲುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದನ್ನೂ ಓದಿ:'ನಾನು 3 ಲಕ್ಷ ಲೀಡ್ನಿಂದ ಗೆಲ್ಲುತ್ತೇನೆ, ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ': ಪ್ರಹ್ಲಾದ್ ಜೋಶಿ