ಬೆಳಗಾವಿ:ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ. ಕುಂದಾನಗರಿ ಬೆಳಗಾವಿ ಜನರು ಈ ಬಜೆಟ್ ಬಗ್ಗೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹಾಗೂ ನ್ಯಾಯವಾದಿ ಎನ್.ಆರ್. ಲಾತೂರ್ ಅವರು 'ಈಟಿವಿ ಭಾರತ' ಜೊತೆಗೆ ಅಭಿಪ್ರಾಯ ಹಂಚಿಕೊಂಡಿದ್ದು, ಹಿಂದೆ ಘೋಷಣೆಯಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ಗೆ ದಿನಗಣನೆ ಶುರುವಾಗಿದೆ. ಪ್ರತಿ ಬಾರಿ ಸರ್ಕಾರಗಳು ಮಂಡಿಸುವ ಬಜೆಟ್ ಮೇಲೆ ಬೆಳಗಾವಿ ಜಿಲ್ಲೆ ಜನರು ತುಂಬಾ ನಿರೀಕ್ಷೆ ಇಟ್ಟುಕೊಳ್ಳುವುದಷ್ಟೇ ಆಗುತ್ತಿದೆ. ಆದರೆ, ಪ್ರಮುಖ ಘೋಷಣೆಗಳು ಕೇವಲ ಘೋಷಣೆ ಆಗಿಯೇ ಉಳಿದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ''ಈ ಹಿಂದೆ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಹೆರಿಟೇಜ್ ಪಾರ್ಕ್, ಗ್ಲಾಸ್ ಹೌಸ್ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು. ಅನೇಕ ಸರ್ಕಾರಗಳು ಬಂದು ಹೋದ್ರೂ ರಿಂಗ್ ರೋಡ್ ಹಾಗೇ ಉಳಿದಿದೆ. ಅಲ್ಲದೇ ರಮೇಶ ಜಾರಕಿಹೊಳಿ ನೀರಾವರಿ ಮಂತ್ರಿ ಆಗಿದ್ದಾಗ 11 ಏತ ನೀರಾವರಿ ಯೋಜನೆಗಳನ್ನು ತಂದಿದ್ದರೂ ಅವು ನೆನೆಗುದಿಗೆ ಬಿದ್ದಿವೆ. ಇನ್ನು ಉದ್ಘಾಟನೆಗೆ ಸಿದ್ಧವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳು ಹಾಗೂ ಸಿಬ್ಬಂದಿ ನೇಮಕಾತಿಗೆ ಹಣಕಾಸಿನ ಅವಶ್ಯಕತೆಯಿದೆ. ಹಾಗಾಗಿ, ಜಿಲ್ಲೆಯ ರಾಜಕಾರಣಿಗಳು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ಬಜೆಟ್ನಲ್ಲಿ ಈ ಎಲ್ಲ ಯೋಜನೆಗಳಿಗೆ ಅನುದಾನ ಕಲ್ಪಿಸುವ ಕೆಲಸ ಮಾಡಬೇಕು'' ಎಂದು ಆಗ್ರಹಿಸಿದರು.
''ಮಹದಾಯಿ ಯೋಜನೆಗೆ ಪ್ರತಿ ಬಜೆಟ್ನಲ್ಲಿ ಕೇವಲ ಅನುದಾನ ಮೀಸಲು ಇಡುವುದಷ್ಟೇ ಆಗಿದೆ. ಆದರೆ, ಕೆಲಸ ಮಾತ್ರ ಒಂದು ಪರ್ಸೆಂಟ್ ನಷ್ಟು ಆಗಿಲ್ಲ. ಯೋಜನೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಅಧಿಕಾರದಲ್ಲಿದ್ದರೂ ವನ್ಯಜೀವಿ ಪರಿಸರ ಇಲಾಖೆ ಒಪ್ಪಿಗೆ ಪಡೆಯಲು ಇವರಿಗೆ ಸಾಧ್ಯವಾಗಲಿಲ್ಲ. ಅದೇ ರೀತಿ ಹುಲಿ ಪ್ರಾಧಿಕಾರವೂ ವಿರೋಧ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಗೋವಾ ಸರ್ಕಾರಕ್ಕೆ ಮನವರಿಕೆಯನ್ನೂ ಮಾಡಲಿಲ್ಲ'' ಎಂದು ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದರು.