ಕರ್ನಾಟಕ

karnataka

ETV Bharat / state

ಬೆಳಗಾವಿಯ ಕುವರಿಗೆ ಸಿಇಟಿಯಲ್ಲಿ 379ನೇ ರ‍್ಯಾಂಕ್: ವೈದ್ಯ ದಂಪತಿಯ ಮಗಳಿಗೆ ಎಂಜಿನಿಯರ್ ಆಗುವ ಬಯಕೆ - CET Topper

ಬೆಳಗಾವಿಯ ಕೆಎಲ್​ಇ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಿನ್ಮಯಿ ಸಿದ್ದಾಪುರ ಅವರು ಸಿಇಟಿಯಲ್ಲಿ 379ನೇ ರ‍್ಯಾಂಕ್ ಪಡೆದಿದ್ದು, ಜಿಲ್ಲೆಗೆ ಟಾಪರ್ ಆಗಿದ್ದಾರೆ.

student-chinmayi-siddapur
ಚಿನ್ಮಯಿ ಸಿದ್ದಾಪುರ (ETV Bharat)

By ETV Bharat Karnataka Team

Published : Jun 6, 2024, 4:38 PM IST

ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಚಿನ್ಮಯಿ ಸಿದ್ದಾಪುರ ಪ್ರತಿಕ್ರಿಯೆ (ETV Bharat)

ಬೆಳಗಾವಿ:ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶಕ್ಕಾಗಿ ನಡೆದ ಪರೀಕ್ಷೆ (ಕೆ-ಸಿಇಟಿ)ಯ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ಕೆಎಲ್‌ಇ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಿನ್ಮಯಿ ಸಿದ್ದಾಪುರ ಅವರು 379ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಚಿನ್ಮಯಿ ತಂದೆ ಡಾ.ಚಂದ್ರಶೇಖರ ಸಿದ್ದಾಪುರ ಜಿಲ್ಲಾ ಆಯುಷ್​ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ, ಐಸಿಎಂಆರ್‌ನಲ್ಲಿ ಆಯುಷ್ ಸಂಶೋಧನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿ ಸಿದ್ದಗಿರಿ ಸಂಸ್ಥಾನ ಮಠದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದಾರೆ. ತಾಯಿ ಡಾ.ರೂಪಶ್ರೀ ಕೂಡ ಆಯುಷ್ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಮ್ಮ ಸಾಧನೆಯ ಕುರಿತು 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಚಿನ್ಮಯಿ, ''ನಾನು ಪಟ್ಟ ಕಷ್ಟ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕಾಲೇಜು ಅವಧಿ ಹೊರತುಪಡಿಸಿ ಮನೆಯಲ್ಲಿ 6 ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಸಂದೇಹಗಳನ್ನು ಕ್ಲಿಯರ್ ಮಾಡುತ್ತಿದ್ದರು. ಯಾವುದಾದರೂ ವಿಷಯ ಕಠಿಣ ಎನಿಸಿದರೆ ಕೂಡಲೇ ಆನ್‌ಲೈನ್‌ನಲ್ಲಿ ತಿಳಿದುಕೊಳ್ಳುತ್ತಿದ್ದೆ. ಭೌತಶಾಸ್ತ್ರದಲ್ಲಿ ಕೆಲವು ಅಂಶಗಳು ಅರ್ಥವಾಗದಿದ್ದರೆ ಫಿಸಿಕ್ಸ್ ವಾಲಾ ಎಂಬ ಆನ್‌ಲೈನ್ ಕ್ಲಾಸ್​ನಲ್ಲಿ ಅರ್ಥೈಸಿಕೊಳ್ಳುತ್ತಿದ್ದೆ. ಅಪ್ಪ, ಅವ್ವ ಬಹಳಷ್ಟು ಪ್ರೋತ್ಸಾಹಿಸುತ್ತಿದ್ದರು'' ಎಂದರು.

''ಸದ್ಯ ಬೆಂಗಳೂರಿನ ಯಾವುದಾದ್ರೂ ಪ್ರತಿಷ್ಠಿತ ಕಾಲೇಜಿನಲ್ಲಿ‌ ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಸೇರಿಕೊಳ್ಳುತ್ತೇನೆ. ಆ ಬಳಿಕ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಮಾಡುವ ಆಸೆ ಇದೆ. ಅಲ್ಲದೇ ಸಿವಿಲ್ ಸರ್ವೀಸ್ ಮತ್ತು ನನ್ನದೇ ಒಂದು ಹೊಸ ಸ್ಟಾರ್ಟಪ್ ಆರಂಭಿಸುವ ಗುರಿಯನ್ನೂ ಇಟ್ಟುಕೊಂಡಿದ್ದೇನೆ'' ಎಂದು ತಿಳಿಸಿದರು.

ನಗರದ ಕ್ಯಾಂಪ್​ನ ಕೇಂದ್ರೀಯ ವಿದ್ಯಾಲಯ-3 ಶಾಲೆಯಲ್ಲಿ ಎಸ್​ಎಸ್​ಎಲ್​ಸಿಯಲ್ಲಿ ಪೂರೈಸಿರುವ ಇವರು ಶೇ.98ರಷ್ಟು ಅಂಕ ಗಳಿಸಿದ್ದರು. ಕೆಎಲ್‌ಇ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.99 ಅಂಕ ಪಡೆದಿದ್ದರು. ಇದೀಗ ಸಿಇಟಿಯಲ್ಲಿ 379ನೇ ರ‍್ಯಾಂಕ್ ಪಡೆಯುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.

ತಂದೆ ಡಾ.ಚಂದ್ರಶೇಖರ ಸಿದ್ದಾಪುರ ಮಾತನಾಡಿ, ''ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎನ್ನುವ ಮಾತಿನಂತೆ, ನಮ್ಮ ಕೈಯಿಂದ ಮಾಡದ ಸಾಧನೆಯನ್ನು ನಮ್ಮ ಮಗಳು ಮಾಡಿರೋದು ದೊಡ್ಡ ಹೆಮ್ಮೆ. ಮಗಳಿಗೆ ವಿಶೇಷ ವ್ಯವಸ್ಥೆ ಏನೂ ಮಾಡಿರಲಿಲ್ಲ. ಇದ್ದ ವ್ಯವಸ್ಥೆಯಲ್ಲೇ ಓದುವಂತೆ ಪ್ರೇರೇಪಿಸುತ್ತಿದ್ದೆವು. ಅದರಂತೆ ಇಂದು ಒಳ್ಳೆಯ ಹಂತಕ್ಕೆ ಬಂದು ನಿಂತಿದ್ದಾಳೆ'' ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ನೀಟ್‌ ಪರೀಕ್ಷೆ: ಪ್ರಥಮ ಸ್ಥಾನ ಪಡೆದ ಮಂಗಳೂರಿನ‌ ಅರ್ಜುನ್ ಕಿಶೋರ್ ಸಂತಸ - NEET TOPPER

ABOUT THE AUTHOR

...view details