ಬೆಳಗಾವಿ: ಇಡೀ ರಾಜ್ಯದಲ್ಲೇ ಸಾರ್ವಜನಿಕವಾಗಿ ಗಣೇಶೋತ್ಸವ ಆರಂಭ ಆಗಿರೋದು ಗಡಿನಾಡು ಬೆಳಗಾವಿಯಲ್ಲಿ. ಇದಕ್ಕೆ ಅದರದ್ದೇಯಾದ ಇತಿಹಾಸವೂ ಉಂಟು. ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರು ಇಲ್ಲಿಗೆ ಬಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಶ್ರೇಯಸ್ಸು ಬೆಳಗಾವಿಗಿದೆ. ಅಂದು ಆರಂಭವಾದ ಈ ಉತ್ಸವ ಇಂದು ಹೆಮ್ಮರವಾಗಿ ಬೆಳೆದಿದ್ದು, ಕುಂದಾನಗರಿಯ ಗಲ್ಲಿ ಗಲ್ಲಿಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಗಣೇಶ ಭಕ್ತರು ಸಂಭ್ರಮಿಸುತ್ತಿದ್ದಾರೆ.
ಹೌದು, ಕುಂದಾನಗರಿ ಬೆಳಗಾವಿಯಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಗಲ್ಲಿ ಗಲ್ಲಿಯಲ್ಲಿಯೂ ಗಣೇಶ ಮೂರ್ತಿಗಳ ದರ್ಬಾರ್ ಜೋರಾಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಚಿಕ್ಕ ಚಿಕ್ಕ ಮೂರ್ತಿ ಸೇರಿ ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಗಣೇಶನ ಆರಾಧನೆ ಮಾಡುತ್ತಿದ್ದಾರೆ. ಬಾಜಾಭಜಂತ್ರಿ, ವಾದ್ಯ ಮೇಳಗಳನ್ನು ಬಾರಿಸುತ್ತಾ, ಪಟಾಕಿ ಸಿಡಿಸಿ ಗಣಪನನ್ನು ಭಕ್ತರು ಮನೆಗೆ ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿತ್ತು.
1905ರಲ್ಲಿ ಬೆಳಗಾವಿಯ ಝೇಂಡಾ ಚೌಕ್ನಲ್ಲಿ ಬಾಲಗಂಗಾಧರ ತಿಲಕರಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಮತ್ತು ದೇಶದ ಎರಡನೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗುತ್ತದೆ. ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಗಣೇಶೋತ್ಸವಕ್ಕೆ ಅಂದು ಚಾಲನೆ ನೀಡಲಾಗಿತ್ತು. ಆ ಪರಂಪರೆ 120 ವರ್ಷಗಳ ನಂತರವೂ ಮುಂದುವರಿದಿದೆ. ಬೆಳಗಾವಿಯಲ್ಲಿ ಅಂದು 1 ಗಣೇಶ ಮಂಡಳಿ ಇದ್ದಿದ್ದು, ಇಂದು 390ಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳು ಗಣೇಶನನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಿದ್ದಾರೆ. ಜಿಲ್ಲಾದ್ಯಂತ 1200ಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳು ಬೃಹದಾಕಾರದ, ಭವ್ಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆ.