ಬೆಳಗಾವಿ: ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಇಲ್ಲಿನ ಜಿಲ್ಲಾ ಪಂಚಾಯತಿ ಸಿಇಓ ಆರಂಭಿಸಿರುವ "ಸಿಇಟಿ-ಸಕ್ಷಮ" ವಿನೂತನ ಕಾರ್ಯಕ್ರಮ ವಿಜ್ಞಾನ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ಈ ಮೂಲಕ ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆಯುವ ರೀತಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆ.
ಹೌದು, ಬೆಳಗಾವಿ ಜಿ.ಪಂ ಸಿಇಒ ರಾಹುಲ್ ಶಿಂಧೆ ಅವರು, 'ಸಿಇಟಿ.-ಸಕ್ಷಮ' ಕಾರ್ಯಕ್ರಮ ಮೂಲಕ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲು ವಿನೂತನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಎಲ್ಲ ಸರ್ಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿಇಟಿ ಪರೀಕ್ಷೆಗೆ ಸಜ್ಜುಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲೇ ಇದು ಹೊಸ ಪ್ರಯತ್ನವಾಗಿದೆ. ಪ್ರತಿದಿನ ಬೆಳಗ್ಗೆ ಇಲ್ಲವೇ ಮಧ್ಯಾಹ್ನ ಸಾಮಾನ್ಯ ತರಗತಿಗಳನ್ನು ಹೊರತುಪಡಿಸಿ ಆಯಾ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.
ಏನಿದು ಸಿಇಟಿ-ಸಕ್ಷಮ?ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಿ, ಉತ್ತಮ ಶ್ರೇಯಾಂಕ ಗಳಿಸುವಂತೆ ಮಾಡುವುದು ಈ ಕಾರ್ಯಕ್ರಮ ಉದ್ದೇಶ. ಇದನ್ನು ಜಿಲ್ಲಾ ಪಂಚಾಯತಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್ 24ರಂದು ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊದಲನೇ ಅಭ್ಯಾಸ ಪರೀಕ್ಷೆಯನ್ನು ನಡೆಸಲಾಗಿದೆ. ಪ್ರತಿ ತಿಂಗಳು ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೇ ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಲ್ಲಿ ಫಲಿತಾಂಶವನ್ನೂ ನೀಡುತ್ತಿರುವುದು ವಿಶೇಷ.
ಬೆಳಗಾವಿ ವಲಯದ 19 ಮತ್ತು ಚಿಕ್ಕೋಡಿ ವಲಯದ 15 ಸೇರಿದಂತೆ ಒಟ್ಟು 34 ಸರ್ಕಾರಿ ಪದವಿಪೂರ್ವ ವಿಜ್ಞಾನ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಕೋಡಿ ವಲಯದಲ್ಲಿ 1,699 ಪ್ರಥಮ ಪಿಯುಸಿ ಹಾಗೂ 1,561 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಬೆಳಗಾವಿ ವಲಯದಲ್ಲಿ 1,444 ಪ್ರಥಮ ಪಿಯುಸಿ ಹಾಗೂ 1359 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 3,143 ಪ್ರಥಮ ಪಿಯುಸಿ ಹಾಗೂ 2,920 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಕಲಿಯುತ್ತಿರುವ ಕಾಲೇಜುಗಳಲ್ಲೇ ಸಿದ್ಧತಾ ಪರೀಕ್ಷೆಯನ್ನು ಪ್ರತಿ ತಿಂಗಳು ಯಶಸ್ವಿಯಾಗಿ ನಡೆಸಲಾಗುತ್ತಿದೆ.
ಸಕ್ಷಮ ಯಶಸ್ಸಿಗೆ ನಾಲ್ಕು ಸಮಿತಿ:ಸಿಇಟಿ-ಸಕ್ಷಮ ಯಶಸ್ಸಿಗೆ ನಡೆಸಲು ನಾಲ್ಕು ಸಮಿತಿಗಳನ್ನು ರಚಿಸಲಾಗಿದೆ.ಶೈಕ್ಷಣಿಕ ಸಮಿತಿ - ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು ಹಾಗೂ ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ಮಾಡಲಿದೆ.ಆಡಳಿತ ಸಮಿತಿ - ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುತ್ತದೆ. ಒ.ಎಂ.ಆರ್. ಸ್ಕ್ಯಾನಿಂಗ್ ಸಮಿತಿ - ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಾದರಿಯಲ್ಲಿ ಒ.ಎಂ.ಆರ್. ಸ್ಕ್ಯಾನಿಂಗ್ ಕಾರ್ಯನಿರ್ವಹಣೆ ಜೊತೆಗೆ ಕಾಲೇಜುವಾರು ಫಲಿತಾಂಶ ಪ್ರಕಟಿಸುತ್ತದೆ. ಅದೇ ರೀತಿ ಸಮನ್ವಯ ಸಮಿತಿ ಪರೀಕ್ಷಾ ಕಾರ್ಯವನ್ನು ಸಮನ್ವಯಗೊಳಿಸುತ್ತಿದೆ. ಜಿ.ಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ್ ದಿವಟರ ಈ ನಾಲ್ಕು ಸಮಿತಿಗಳ ಸಮನ್ವಯಕಾರರಾಗಿ ಕೆಲಸ ಮಾಡುತ್ತಿದ್ದಾರೆ.