ಬೆಳಗಾವಿ:ಎಟಿಎಂಗೆ ಹಣ ಹಾಕಿದ ಬ್ಯಾಂಕ್ ಸಿಬ್ಬಂದಿ, ಎರಡು ಗಂಟೆ ಬಳಿಕ ತಾನೇ ಅದರಲ್ಲಿನ ಲಕ್ಷಾಂತರ ರೂ. ಹಣವನ್ನು ಲಪಟಾಯಿಸಿದ್ದ ಪ್ರಕರಣ ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಜ್ಯೋತಿ ನಗರದ ನಿವಾಸಿ ಕೃಷ್ಣಾ ಸುರೇಶ ದೇಸಾಯಿ (23) ಬಂಧಿತ ಆರೋಪಿ.
ಎಟಿಎಂಗೆ ಹಣ ಹಾಕಿ ಬಳಿಕ ತಾನೇ ಎಗರಿಸಿದ: ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಎಟಿಎಂ ಕಸ್ಟೋಡಿಯನ್ ಆಗಿ ಆರೋಪಿ ಕೃಷ್ಣಾ ಕೆಲಸ ಮಾಡುತ್ತಿದ್ದರು. ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲ ಹೆಚ್‌ಡಿಎಫ್‌ಸಿ ಎಟಿಎಂಗಳಿಗೆ ಕೃಷ್ಣಾ ಹಣ ಹಾಕುತ್ತಿದ್ದರು. ನವೆಂಬರ್ 26ರಂದು ಬೆಳಗಾವಿಯ ಕೋರ್ಟ್ ಎದುರಿನ ಹೆಚ್‌ಡಿಎಫ್‌ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ ಕೃಷ್ಣಾ, ಕೆಲ ಹೊತ್ತಿನ ಬಳಿಕ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಟಿಎಂ ಕಳ್ಳತನ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಪೊಲೀಸರಿಗೆ ಶಾಕ್ ಆಗಿತ್ತು. ಸಿಸಿಟಿವಿ ಕ್ಯಾಮರಾದಲ್ಲಿ ಎಟಿಎಂನಲ್ಲಿ ಕೃಷ್ಣಾ ಹಣ ಹಾಕಿ ಬಳಿಕ ವಾಪಸ್ ಬಂದು ಹಣ ತೆಗೆದುಕೊಂಡು ಹೋಗಿದ್ದ ದೃಶ್ಯ ಸೆರೆಯಾಗಿತ್ತು.