ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದ ಹೊರವಲಯದಲ್ಲಿರುವ ಕಣಿಮಿಣಿಕೆಯಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರೆತಿದೆ. ಕಣಿಮಿಣಿಕೆ ವಸತಿ ಯೋಜನೆ ಬೆಂಗಳೂರು- ಮೈಸೂರು ರಸ್ತೆಗೆ ಸಮೀಪವಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಕಣಿಮಿಣಿಕೆ 2 ಬಿಹೆಚ್ಕೆ ಫ್ಲಾಟ್ ದರ 25 ಲಕ್ಷದಿಂದ 30 ಲಕ್ಷ, 3 ಬಿಹೆಚ್ಕೆ ಫ್ಲಾಟ್ ದರ 40 ಲಕ್ಷದಿಂದ 64 ಲಕ್ಷ ನಿಗದಿಪಡಿಸಲಾಗಿತ್ತು.
ಶನಿವಾರ ನಡೆದ ಫ್ಲಾಟ್ ಮೇಳದಲ್ಲಿ ಸುಮಾರು 600ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಇದರಲ್ಲಿ ಸುಮಾರು 200 ಸಾರ್ವಜನಿಕರು ಫ್ಲಾಟ್ನ ಪ್ರಾರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿ, ಹಂಚಿಕೆ ಪತ್ರವನ್ನು ಪಡೆದಿದ್ದಾರೆ. 50 ಮಂದಿ ಚೆಕ್ ಅನ್ನು ನೀಡಿದ್ದು, ಸೋಮವಾರ ಆರ್ಟಿಜಿಎಸ್ ಮೂಲಕ ಸಂಪೂರ್ಣ ಹಣ ಪಾವತಿಸಿದ ನಂತರ ಹಂಚಿಕೆ ಪತ್ರವನ್ನು ನೀಡಲಾಗುವುದು. ಪ್ರಸ್ತುತ ಫ್ಲಾಟ್ನ ದರವು ಹಳೆಯದಾಗಿದ್ದು, ಸದ್ಯದಲ್ಲಿಯೇ ಫ್ಲಾಟ್ನ ಮೊತ್ತವನ್ನು ಪರಿಷ್ಕರಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.