ಬೆಂಗಳೂರು:ನಗರದಲ್ಲಿ ಸುರಿವ ಮಳೆಗೆ ಪಾಲಿಕೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಇನ್ನೂ ಹೆಚ್ಚಿನ ತಂತ್ರಜ್ಞಾನ ಬಳಸಲು ಮುಂದಾಗಿದೆ. ಸದ್ಯ ಪಾಲಿಕೆಯಿಂದ ರಾಜಕಾಲುವೆ, ದ್ವಿತೀಯ ರಾಜಕಾಲುವೆ, ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜೊತೆಗೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ಗಳ ಬಳಿ ಇರುವ ತ್ಯಾಜ್ಯ ತೆರವುಗೊಳಿಸಿ ರಸ್ತೆ ಮೇಲೆ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ತೊಳುಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆ ಮೇಲೆ ಶೇಖರಣೆಯಾಗಿರುವ ಅನುಪಯುಕ್ತ ಕಟ್ಟಡ ತ್ಯಾಜ್ಯಗಳ ತೆರೆವು ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ.
124 ಕಡೆ ಸೆನ್ಸಾರ್ಗಳ ಅಳವಡಿಕೆ:ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹವನ್ನು ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ರಾಜಕಾಲುವೆಗಳಲ್ಲಿ ತಂತ್ರಜ್ಞಾನದ ಬಳಸಿಕೊಂಡು 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು ಕೆಎಸ್‌ಎನ್‌ಡಿಎಂಸಿ ವತಿಯಿಂದ ಅಳವಡಿಸಲಾಗಿದೆ. ಪ್ರತಿಯೊಂದು ಸೆನ್ಸಾರ್ ಯಂತ್ರಕ್ಕೂ ಸೋಲಾರ್ ಅಳವಡಿಸಲಾಗಿದೆ. ಅದರಿಂದ ನಿತ್ಯ ಅಂತರ್ಜಾಲದ ಮೂಲಕ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ಕೂಡಲೆ ಮಾಹಿತಿ ತಿಳಿಯಲಿದೆ. ಪಾಲಿಕೆಯ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್ಗೂ ಮಾಹಿತಿ ರವಾನೆಯಾಗಲಿದೆ.
ಸೆನ್ಸಾರ್ ಅಳವಡಿಸಿರುವ ಕಡೆ ರಾಜಕಾಲುವೆಯಲ್ಲಿ ಹರಿಯುವ ನೀರಿನ ಮಟ್ಟವನ್ನು ಬಣ್ಣದ ಆಧಾರದಲ್ಲಿ ತಿಳಿಯಬಹುದಾಗಿದೆ. ಅದರಂತೆ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯ ಇರುವುದಿಲ್ಲ. ಕೆಂಪು ಬಣ್ಣವಿದ್ದರೆ ಅಪಾಯ ಎಂದರ್ಥ, ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ತಿಳಿಯಲಿದೆ. ಆ ಮಾಹಿತಿಗೆ ಅನುಗುಣವಾಗಿ ಪ್ರವಾಹ ಉಂಟಾಗುವ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ತೆರಳುವಂತೆ ಸೂಚನೆ ನೀಡಬಹುದಾಗಿದೆ. ಇದರಿಂದ ಪ್ರವಾಹದಿಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ.