ಮೈಸೂರು : ಕಳೆದ ಮೂರ್ನಾಲ್ಕು ದಿನಗಳಿಂದೀಚೆಗೆ ಬೀದರ್ ಮತ್ತು ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳು ಜನರ ಮನಸಲ್ಲಿ ಹಸಿರಾಗಿರುವಾಗಲೇ ಇದೀಗ ಮೈಸೂರಿನಲ್ಲೂ ಹಾಡಹಗಲೇ ದುಷ್ಕರ್ಮಿಗಳು ದರೋಡೆ ನಡೆಸಿದ್ದಾರೆ.
ಹೌದು, ರಾಜ್ಯದಲ್ಲಿ ಮತ್ತೊಂದು ಭೀಕರ ದರೋಡೆ ನಡೆದಿದ್ದು, ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಮುಸುಕುದಾರಿಗಳು ಹಾಡ ಹಗಲೇ ಕಾರನ್ನು ಅಡ್ಡಗಟ್ಟಿ, ಕದ್ದೊಯ್ದಿರುವ ಘಟನೆ ನಡೆದಿದೆ. ಕೇರಳ ಉದ್ಯಮಿ ಸೂಫಿ ಎಂಬುವವರ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಕಾರನ್ನು ಅಪಹರಿಸಿ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ದರೋಡೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಳೆದ ವಾರ ಬೀದರ್ನಲ್ಲಿ ನಡೆದಿತ್ತು ರಕ್ತಸಿಕ್ತ ದರೋಡೆ: ಕಳೆದ ವಾರ ಬೀದರ್ನ ಎಸ್ಬಿಐ ಬ್ಯಾಂಕ್ ಮುಂದೆ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿಗೆ ಗುಂಡು ಹಾರಿಸಿ 1 ಕೋಟಿ ರೂ ದರೋಡೆ ಮಾಡಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಘಟನೆಯುಲ್ಲಿ ಒಬ್ಬ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಹೈದರಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ 10 ವಿಶೇಷ ತಂಡಗಳನ್ನ ರಚಿಸಿ ಆರೋಪಿಗಳಿಗಾಗಿ ತಲಾಷ್ ನಡೆಸಲಾಗುತ್ತಿದೆ . ಹೈದರಾಬಾದ್ ಸೇರಿದಂತೆ ರಾಯಪುರ ಹಾಗೂ ಬಿಹಾರದ ಶಂಕಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಬೀದರ್ನಲ್ಲಿ ದರೋಡೆ ಮಾಡಿ ಹೈದರಾಬಾದ್ ಗೆ ಬಂದಿದ್ದ ದುಷ್ಕರ್ಮಿಗಳು ಅಲ್ಲೂ ಗುಂಡಿನ ದಾಳಿ ನಡೆಸಿ ರಾಯಪುರ್ ಮೂಲಕ ಬಿಹಾರ ತಲುಪಿದ್ದಾರೆ ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ.
ಮಂಗಳೂರಿನ ಬ್ಯಾಂಕ್‌ನಲ್ಲಿ ಗನ್ ತೋರಿಸಿ ₹4 ಕೋಟಿ ಲೂಟಿ : ಬೀದರ್ ಘಟನೆ ಮಾಸುವ ಮುನ್ನವೇ ಮುಸುಕುಧಾರಿಗಳ ತಂಡವೊಂದು ಪಿಸ್ತೂಲ್ ತೋರಿಸಿ ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆಸಿ ಪರಾರಿಯಾಗಿತ್ತು. "ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ" ಎಂದು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದರು.
ಇದನ್ನೂ ಓದಿ : ಬೀದರ್ ದರೋಡೆ ಪ್ರಕರಣದಲ್ಲಿ ಅಮಿತ್ ಕುಮಾರ್ ಕೈವಾಡ ಶಂಕೆ: ತೆಲಂಗಾಣ ಪೊಲೀಸ್ - BIDAR ROBBERY