ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಬಿಬಿಎಂಪಿ ಪ್ರಕಟಿಸಿದ ಹೊಸ ಕರಡು ಆಸ್ತಿ ತೆರಿಗೆ ನೀತಿಗೆ ಆಕ್ಷೇಪಣೆ ಸಲ್ಲಿಸಿದೆ. "ಈ ಹಿಂದೆ ನಿಗದಿಪಡಿಸಿದ್ದ ಸ್ಯಾಸ್ ಮೌಲ್ಯಮಾಪನ ಯೋಜನೆ, ಅರ್ಹ ವ್ಯಕ್ತಿಗಳಿಂದ ಒಂದು ವರ್ಷಕ್ಕೂ ಹೆಚ್ಚು ಅಧ್ಯಯನ ಮತ್ತು ಚರ್ಚೆಯ ನಂತರ ಪ್ರಕಟಿಸಲಾಗಿತ್ತು. ಈ ಮೌಲ್ಯಮಾಪನ ಯಶಸ್ವಿ ಹಾಗೂ ಸಮಂಜಸವಾಗಿದ್ದು, ಅದನ್ನು ಮುಂದುವರಿಸುವುದು ಸೂಕ್ತವಾಗಿದೆ. ಈಗ ಪ್ರಕಟಿಸಿರುವ ಹೊಸ ನೀತಿಯನ್ನು ಪಾಲಿಕೆ ಹಿಂಪಡೆಯಬೇಕು" ಎಂದು ಎಫ್.ಕೆ.ಸಿ.ಸಿ.ಐ ಹಿರಿಯ ಉಪಾಧ್ಯಕ್ಷ ಎಂ.ಜಿ ಬಾಲಕೃಷ್ಣ ಆಗ್ರಹಿಸಿದರು.
ನಗರದ ಕೆಜಿ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಕ್ಯಾಬಿನೆಟ್ ಹಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಬಿಎಂಪಿ ಸುಮಾರು ಶೇಕಡಾ 55 ರಷ್ಟು ಆಸ್ತಿದಾರರ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ವಿಫಲವಾಗಿರುವುರಿಂದ ಆದಾಯದಲ್ಲಿ ನಷ್ಟವಾವಾಗುತ್ತಿದೆ. ತಮ್ಮ ಕಾರ್ಯಕ್ಷಮತೆಯಲ್ಲಿನ ಕೊರತೆ ಹಾಗೂ ಅದಕ್ಷತೆಯನ್ನು ಮರೆಮಾಚಲು ಹೊಸ ತೆರಿಗೆ ನೀತಿಯನ್ನು ತೆರಿಗೆದಾರರ ಮೇಲೆ ಹೇರಲು ಪ್ರಯತ್ನಿಸಲಾಗುತ್ತಿದೆ. ಈ ಹೊಸ ನೀತಿಯಿಂದಾಗಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಹೆಚ್ಚಿನ ತೆರಿಗೆ ಹೇರಿ ಶಿಕ್ಷಿಸಿದಂತಾಗುತ್ತದೆ" ಎಂದು ಹೇಳಿದರು.