ಬೆಂಗಳೂರು:ಬಿಬಿಎಂಪಿಯಲ್ಲಿ ದಾಖಲಾಗಿರುವ ಎಲ್ಲಾ ಎ ಖಾತಾ ಮತ್ತು ಬಿಖಾತಾಎರಡನ್ನೂ ಡಿಜಿಟಲೀಕರಣ ಮಾಡಲಾಗಿದ್ದು, 21 ಲಕ್ಷಕ್ಕೂ ಹೆಚ್ಚು ಕರಡು ಇ-ಖಾತಾಗಳನ್ನು ಯಾರಾದರೂ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಆನ್‌ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಬಿಬಿಎಂಪಿ, ಕರಡು ಇ-ಖಾತಾ ಅನ್ನು ಪಾಲಿಕೆಯ ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಬಿಬಿಎಂಪಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಯಾಗಿದ್ದು, ಸಂಪೂರ್ಣ ಸಂಪರ್ಕರಹಿತವಾಗಿದೆ. ಅಂತಿಮ ಇ-ಖಾತಾ ಪಡೆಯಲು ನಾಗರಿಕರು ಆನ್‌ಲೈನ್‌ನಲ್ಲಿ ಕೆಲವು ದಾಖಲೆಗಳನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದೆ.
ಇ-ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ ಹೊಂದಿರಬೇಕು. 2004ರ ಏಪ್ರಿಲ್ನಿಂದ ಇಲ್ಲಿಯವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಅದರ ಪ್ರಮಾಣ ಪತ್ರ ಸಂಖ್ಯೆಯನ್ನು ಮಾತ್ರ ನಮೂದಿಸಬೇಕು ಎಂದು ಹೇಳಿದೆ.