ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಪಾಲಿಕೆಯ ಆರೋಗ್ಯ ಮತ್ತು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ನಗರದ ಪಶ್ಚಿಮ ವಲಯದ ಮತ್ತಿಕೆರೆ ಹಾಗೂ ಮಲ್ಲೇಶ್ವರ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಪ್ರಾಯೋಗಿಕವಾಗಿ ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಕ್ರೋ ಚಿಪ್ ತಂತ್ರಜ್ಞಾನದಿಂದ ನಾಯಿಯ ವಾಸಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ಚಿಪ್‌ನಲ್ಲಿ ಶೇಖರಿಸಬಹುದಾಗಿದೆ ಎಂದರು.
ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ (ETV Bharat) ಮೈಕ್ರೋ ಚಿಪ್ ತಂತ್ರಜ್ಞಾನವನ್ನು ಈಗಾಗಲೇ ಹಲವಾರು ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳಿಗೆ ಅಳವಡಿಸಿಕೊಂಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಬಿಝ್ ಆರ್ಬಿಟ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಬೀದಿ ನಾಯಿಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಮೈಕ್ರೋ ಚಿಪ್ ಒಂದು ಅಕ್ಕಿಕಾಳು ಗಾತ್ರದ ಸಾಧನವಾಗಿದ್ದು, ಪ್ರಾಣಿಗಳಲ್ಲಿ ಶಾಶ್ವತ ಗುರುತಿನ ವಿಧಾನವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಶಾಶ್ವತ ಗುರುತಾಗಿ ಬಳಸಬಹುದು:ಇದನ್ನು ಪ್ರಾಣಿಗಳ ಚರ್ಮದ ಕೆಳಗೆ ಇಂಜೆಕ್ಷನ್ ಮೂಲಕ ಇರಿಸಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಮತ್ತು ಇದು ಪ್ರಾಣಿಗಳ ಜೀವನ ಪರ್ಯಂತ ಶಾಶ್ವತ ಗುರುತಾಗಿ ಬಳಸಬಹುದಾಗಿರುತ್ತದೆ. ಇದು ಪ್ರಪಂಚದಾದ್ಯಂತ ಬಳಸಲಾಗುವ ಯುನಿಕ್ ಸಂಖ್ಯೆಯಾಗಿರುತ್ತದೆ. ಈ ಅಭಿಯಾನ ಯಶಸ್ವಿಯಾದರೆ ಪಾಲಿಕೆಯ ಎಲ್ಲ ವಲಯಗಳಲ್ಲಿಯೂ ಬೀದಿ ನಾಯಿಗಳಿಗೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವತಿಯಿಂದ ಬೀದಿ ನಾಯಿಗಳಿಗೆ ಸಂಯೋಜಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಮೈಕ್ರೋ ಚಿಪ್ ಅಳವಡಿಸುವ ತಂತ್ರಜ್ಞಾನದಿಂದ ಬೀದಿ ನಾಯಿಗಳಿಗೆ ಮತ್ತೆ-ಮತ್ತೆ ಲಿಸಿಕೆ ಹಾಕುವುದನ್ನು ತಡೆಯಬಹುದಾಗಿದೆ ಎಂದರು.
ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ (ETV Bharat) ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣವನ್ನು ಬಳಸಿ ಗುರುತಿಸಲಾಗುತ್ತಿದ್ದು, ಒಂದು ವಾರ ಮಾತ್ರ ಬಣ್ಣದ ಗುರುತು ಪತ್ತೆಹಚ್ಚಬಹುದಾಗಿದೆ. ಆದುದರಿಂದ ಬೀದಿನಾಯಿಗಳಿಗೆ ಪದೇ ಪದೆ ಲಸಿಕೆ ಹಾಕುವ ಸಾಧ್ಯತೆಯಿರುತ್ತದೆ. ಮೈಕ್ರೋ ಚಿಪ್ ತಂತ್ರಜ್ಞಾನದಿಂದ ಈ ನ್ಯೂನತೆಯನ್ನು ಸರಿಪಡಿಸಬಹುದಾಗಿದೆ ಹಾಗೂ ನಾಯಿಗಳಲ್ಲಿ ಲಸಿಕೆ ಹಾಕಿರುವ ಮಾಹಿತಿಯನ್ನು ನಿಖರವಾಗಿ ತಿಳಿಯಬಹುದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯದಿಂದ, ಬೀದಿ ನಾಯಿಗಳ ನಿಖರವಾದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಧನಂಜಯ್ - ಕಂಜನ್ ಆನೆಗಳ ಕಾದಾಟದ ಬಗ್ಗೆ ಡಿಸಿಎಫ್ ಪ್ರಭುಗೌಡ ಹೇಳಿದ್ದೇನು? - DHANANJAY KANJAN ELEPHANT FIGHT