ಕರ್ನಾಟಕ

karnataka

ವಿವಿಧ ರೀತಿಯ ತೆರಿಗೆಗಳ ಪಾವತಿಗೆ ಡಿಮ್ಯಾಂಡ್​ ನೋಟಿಸ್​ ಜಾರಿ : ಹೈಕೋರ್ಟ್ ಮೆಟ್ಟಿಲೇರಿದ ದಿನೇಶ್​ ​ ಗುಂಡೂರಾವ್​ - Gundurao moved to the High Court

By ETV Bharat Karnataka Team

Published : Sep 17, 2024, 8:18 PM IST

ನಕ್ಷೆ ಮಂಜೂರಾತಿ ನೀಡಲು ತೆರಿಗೆ, ಸೆಸ್‌ಗಳು ಹಾಗೂ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಆಗಸ್ಟ್​ 29ರಂದು ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ಪಾಲಿಕೆ ಜಾರಿಗೊಳಿಸಿರುವ ಈ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ದಿನೇಶ್​ ಗುಂಡೂರಾವ್​​ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

Issue of demand notice for payment of various types of taxes
ವಿವಿಧ ರೀತಿಯ ತೆರಿಗೆಗಳ ಪಾವತಿಗೆ ಡಿಮ್ಯಾಂಡ್​ ನೋಟಿಸ್​ ಜಾರಿ : ಹೈಕೋರ್ಟ್ ಮೆಟ್ಟಿಲೇರಿದ ದಿನೇಶ್​ ​ ಗುಂಡೂರಾವ್​ (ETV Bharat)

ಬೆಂಗಳೂರು: ತಮ್ಮ ಮಾಲೀಕತ್ವದ ಆಸ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ, ಪರವಾನಿಗೆ ಶುಲ್ಕ, ಕೆರೆ ಜೀರ್ಣೋದ್ಧಾರ ಶುಲ್ಕ ಸೇರಿದಂತೆ 41 ಲಕ್ಷಕ್ಕೂ ಅಧಿಕ ಮೊತ್ತದ ವಿವಿಧ ಬಗೆಯ 16ಕ್ಕೂ ಹೆಚ್ಚು ತೆರಿಗೆ, ಶುಲ್ಕಗಳನ್ನು ಪಾವತಿಸುವಂತೆ ಬಿಬಿಎಂಪಿ ಜಾರಿಗೊಳಿಸಿರುವ ಡಿಮ್ಯಾಂಡ್​ ನೋಟಿಸ್ ಪ್ರಶ್ನಿಸಿ ಸಚಿವ ದಿನೇಶ್​ ಗುಂಡೂರಾವ್ ಹೈಕೋರ್ಟ್ ಮೆಟ್ಟಿಲಿದ್ದಾಾರೆ.


ಸಚಿವ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬಸ್ಸುಮ್ ಗುಂಡೂರಾವ್ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ, ನಗರ ಯೋಜನಾ ಸಹಾಯಕ ನಿರ್ದೇಶಕ ಬಿಬಿಎಂಪಿ ಪಶ್ಚಿಮ ವಿಭಾಗ ಇವರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿಯಲ್ಲಿ ಏನಿದೆ ?:ಆರ್.ಟಿ. ನಗರದ ಮಠದಹಳ್ಳಿಯಲ್ಲಿ ತಮ್ಮ ಒಡೆತನದ 608.21 ಚದರ ಅಡಿ ಆಸ್ತಿ ಇದ್ದು, ಇದಕ್ಕೆ ಬಿಬಿಎಂಪಿ ಖಾತಾ ಸಹ ನೀಡಿದೆ. ಈ ಆಸ್ತಿಗೆ ಇಲ್ಲಿ ತನಕ ತೆರಿಗೆ ಕಟ್ಟಲಾಗಿದೆ. ಈಗ ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆೆ ಮಂಜೂರಾತಿ ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ, ನಕ್ಷೆ ಮಂಜೂರಾತಿ ನೀಡಲು ನೆಲ ಬಾಡಿಗೆ ಶುಲ್ಕ, ಅದರ ಮೇಲೆ ಶೇ.18ರಷ್ಟು ಜಿಎಸ್‌ಟಿ. ಭದ್ರತಾ ಠೇವಣಿ, ಕಟ್ಟಡ ಹಾಗೂ ನಿವೇಶನ ಅಭಿವೃದ್ಧಿ ಶುಲ್ಕ, ಕೆರೆ ಜೀರ್ಣೋದ್ಧಾರ ಶುಲ್ಕ, ವರ್ತುಲ ರಸ್ತೆ ಶುಲ್ಕ, ಕೊಳಗೇರಿ ಅಭಿವೃದ್ಧಿ ಸೆಸ್ ಸೇರಿದಂತೆ ವಿವಿಧ ಬಗೆಯ 41.55 ಲಕ್ಷ ಶುಲ್ಕ, ತೆರಿಗೆ, ಸೆಸ್‌ಗಳು ಹಾಗೂ 3.46 ಲಕ್ಷ ಕಾರ್ಮಿಕರ ಸೆಸ್ ಪಾವತಿಸುವಂತೆ ಆಗಸ್ಟ್​ 29ರಂದು ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ತಾವು ಇದಕ್ಕೆ ಬಾಧ್ಯಸ್ಥರಲ್ಲ ಹಾಗೂ ಈ ಡಿಮ್ಯಾಂಡ್ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಆದ್ದರಿಂದ, ಕರ್ನಾಟಕ ಪೌರ ನಿಗಮಗಳು ಹಾಗೂ ಇತರ ಕೆಲವು ಕಾನೂನುಗಳ (ತಿದ್ದುಪಡಿ) ಕಾಯ್ದೆ-2021ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಕರ್ನಾಟಕ ಪಟ್ಟಣ ಹಾಗೂ ನಗರ ಯೋಜನಾ ಕಾಯ್ದೆಯ ಸೆಕ್ಷನ್ 18-ಎ ರದ್ದು ಪಡಿಸಬೇಕು. ಪಾಲಿಕೆ ಜಾರಿಗೊಳಿಸಿರುವ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಬೇಕು. ತಮ್ಮ ಒಡೆತನದ ಆಸ್ತಿಯಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಯಾವುದೇ ಷರತ್ತು ಹಾಗೂ ತೆರಿಗೆ, ಶುಲ್ಕಗಳನ್ನು ವಿಧಿಸದೇ ನಕ್ಷೆೆ ಮಂಜೂರುರಾತಿ ನೀಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನು ಓದಿ:ಲೈವ್ Karnataka News - Karnataka Today Live : ಕರ್ನಾಟಕ ವಾರ್ತೆ Tue Sep 17 2024 ಇತ್ತೀಚಿನ ಸುದ್ದಿ

ABOUT THE AUTHOR

...view details