ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿನ ಎಸ್‌ಸಿ, ಎಸ್‌ಟಿ ಸಮುದಾಯದ ಪೌರಕಾರ್ಮಿಕರ ವಸತಿ ಯೋಜನೆಗೆ ಗ್ರಹಣ ಹಿಡಿದಿದೆ. 2008ರಲ್ಲಿ ಭೂಮಿ ಪಡೆದುಕೊಂಡಿದ್ದರೂ ಯೋಜನೆಗೆ ಅನುಮೋದನೆ ಮಾತ್ರ ಮರೀಚಿಕೆಯಾಗಿದೆ. 20x30 ಅಡಿ ಅಳತೆಯ ನಿವೇಶಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚುವುದು ಈ ಯೋಜನೆಯ ಉದ್ದೇಶ.
2008ರಲ್ಲಿ 29 ಎಕರೆ ಜಾಗ ಪಡೆದುಕೊಂಡಿದ್ದರೂ ಪಾಲಿಕೆ ಲೇಔಟ್ ನಿರ್ಮಾಣ ಮಾಡಲು ವಿಳಂಬ ಮಾಡುತ್ತಿರುವುದರಿಂದ ಅರ್ಹ ಫಲಾನುಭವಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮತ್ತು ಕೆಂಗೇರಿ ಹೋಬಳಿಯಲ್ಲಿ 20X30 ಅಡಿ ಅಳತೆಯ ನಿವೇಶನಗಳ ಹಂಚಿಕೆಗೆ 1,110 ಅರ್ಜಿದಾರರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದುವರೆಗೂ ಈ ಯೋಜನೆಗೆ ಅನುಮೋದನೆ ದೊರೆತಿಲ್ಲ. ಇದು ಬಿಬಿಎಂಪಿ ಪೌರಕಾರ್ಮಿಕರು ಹಾಗೂ ಅರ್ಹ ಎಸ್‌ಸಿ/ಎಸ್‌ಟಿ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟು ಜಮೀನಿನ ಪೈಕಿ ದಾಸನಾಪುರ ಹೋಬಳಿಯಲ್ಲಿ 22 ಎಕರೆ ಹಾಗೂ ಕೆಂಗೇರಿ ಹೋಬಳಿಯಲ್ಲಿ 7 ಎಕರೆ ಜಮೀನು ನಿಗದಿಪಡಿಸಲಾಗಿತ್ತು. 2018ರಲ್ಲಿ ಬೆಂಗಳೂರು ನಗರಾಭಿವೃದ್ದಿ ಇಲಾಖೆ ಈ ಪ್ರದೇಶಗಳಿಗೆ ಬೇಲಿ ಹಾಕುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಮೀನು ಪ್ರಕ್ರಿಯೆ ವಿಳಂಬವಾಗಿತ್ತು.