ಬೆಂಗಳೂರು: ನಗರದಲ್ಲಿ ಸಮಗ್ರ ಮೈಕ್ರೋ ಪ್ಲಾನ್ ಮಾಡಿಕೊಂಡು ಅದರ ಪ್ರಕಾರವೇ ಡೆಂಘೀಪ್ರಕರಣಗಳನ್ನು ನಿಯಂತ್ರಿಸಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ನಿಯಂತ್ರಿಸುವ ನಿಟ್ಟಿನಲ್ಲಿ ವಲಯವಾರು ಡ್ರೈ ಡೇ ನಡೆಸಲಾಗುತ್ತಿದ್ದು, ಅದರ ಅಂಗವಾಗಿ ಪೂರ್ವ ವಲಯ ಸಿವಿ ರಾಮನ್ ನಗರದ ಜಿಎಂ ಪಾಳ್ಯ ಹಾಗೂ ನ್ಯೂ ತಿಪ್ಪಸಂದ್ರ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೀ ರೋಗಹರಡುತ್ತದೆ. ಆದ್ದರಿಂದ ನೀರಿನ ಸಂಪ್, ಡ್ರಮ್, ಕೊಳಾಯಿ ಬಳಿ, ಹೂವಿನ ಕುಂಡ ಸೇರಿದಂತೆ ಇನ್ನಿತರ ಕಡೆ ಪರಿಶೀಲಿಸಿ ವಾರಕ್ಕೊಮ್ಮೆ ಎಲ್ಲ ಕಡೆ ನೀರನ್ನು ಹೊರ ಹಾಕಿ ಒಣಗಿಸಿ ಮತ್ತೆ ಶುದ್ಧ ನೀರು ಸಂಗ್ರಹಿಸಕೊಳ್ಳಬೇಕು. ವಾರಕ್ಕಿಂತ ಹೆಚ್ಚು ದಿನಗಳು ಒಂದೇ ನೀರು ಸಂಗ್ರಹವಾಗಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ವಾರಕ್ಕೊಮ್ಮೆ ತಪ್ಪದೇ ಹಳೆ ನೀರು ತೆಗೆದು ಹೊಸ ನೀರು ತುಂಬಿಸಿಕೊಳ್ಳಲು ನಾಗರಿಕರಲ್ಲಿ ಮನವಿ ಮಾಡಿದರು.
ಡೆಂಘೀ ಹರಡುವ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡುವ ವೇಳೆ ಬಿತ್ತಿಪತ್ರಗಳನ್ನು ವಿತರಿಸಿದರೆ ಲಾರ್ವಾ ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಜೊತೆ ಲಾರ್ವಾ ಉತ್ಪತ್ತಿ ತಾಣಗಳನ್ನು ಗುರಿಸಿರುವ ಕಡೆ ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಉತ್ಪತ್ತಿ ತಾಣವನ್ನು ನಿಯಂತ್ರಿಸ ಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಡೆಂಘೀ ತಡೆಗಟ್ಟುವ ಸಲುವಾಗಿ ವಲಯವಾರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಫ್ರಿಸ್ಮ್-ಹೆಚ್ ತಂತ್ರಾಂಶದಲ್ಲಿ ಆಯಾ ದಿನವೇ ನಮೂದಿಸಬೇಕು ಎಂದು ಸೂಚಿಸಿದರು.