ಬೆಂಗಳೂರು:ನಗರದಲ್ಲಿ ನೀರು ಸರಬರಾಜು ಮಾಡುವ ಟ್ಯಾಂಕರ್ಗಳಿಂದ ದುಪ್ಪಟ್ಟು ದರ ವಸೂಲಿಗೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದ್ದು, ಮಾರ್ಚ್ 1ರಿಂದ 7ರ ವರೆಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ನಗರದ ಕಾವೇರಿ ಭವನದಲ್ಲಿಂದು ಆಯೋಜಿಸಿದ್ದ ಬಿಬಿಎಂಪಿ ಹಾಗೂ ಜಲಮಂಡಳಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ನೀರಿನ ಟ್ಯಾಂಕರ್ ದರವನ್ನು ಅಂತಿಮವಾಗಿ ನಿಗದಿಪಡಿಸಲಾಗುತ್ತದೆ ಎಂದರು.
ಟ್ಯಾಂಕರ್ ವಾಹನ ನೋಂದಣಿ:ನಗರದಲ್ಲಿ ಒಟ್ಟಾರೆ ಸಾರಿಗೆ ಇಲಾಖೆಯ 3,500 ನೀರಿನ ಟ್ಯಾಂಕರ್ ಮಾಲೀಕರಿದ್ದು, ಬಿಬಿಎಂಪಿಯಲ್ಲಿ ಕೇವಲ 54 ನೀರಿನ ಟ್ಯಾಂಕರ್ ವ್ಯಾಪಾರ ಪರವಾನಗಿ ಪಡೆದಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ಕಸಿಯುವರನ್ನು ನಿಯಂತ್ರಿಸುವ ಸಲುವಾಗಿ ಮಾ.1 ರಿಂದ 7ನೇ ದಿನಾಂಕದ ಒಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಆ ನಂತರ ಪಾಲಿಕೆ ಅದಕ್ಕೆ ಷರತ್ತು ವಿಧಿಸಲಿದೆ. ನೀರಿನ ವ್ಯವಹಾರ ನಡೆಸುವ ಎಲ್ಲರಿಗೂ ವಾಹನ ನೋಂದಣಿ ಮಾಡಲು ಅವಕಾಶವಿದೆ. ಮಾ.7ರೊಳಗೆ ನೀರಿನ ಟ್ಯಾಂಕರ್ ವಾಹನ ನೋಂದಣಿ ಮಾಡದಿದ್ದರೆ ನೀರು ಸರಬರಾಜು ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಾಕೀತು ಮಾಡಿದರು.
ಇಬ್ಬರು ಎಇಗಳ ನೇಮಕ:ಪರವಾನಗಿ ಪಡೆದು ನೀರು ಸರಬರಾಜು ಮಾಡಬೇಕಿದೆ ನೋಂದಣಿ ಮಾಡಿಕೊಳ್ಳದವರ ಟ್ಯಾಂಕರ್ ಅನ್ನು ವಶಕ್ಕೆ ಪಡೆಯುತ್ತೇವೆ. ಪಾಲಿಕೆ ನೀರಿನ ಟ್ಯಾಂಕರ್ ನೋಂದಣಿಗಾಗಿ ತಂತ್ರಾಂಶವನ್ನು ರಚಿಸುವ ಕಾರ್ಯ ಮಾಡಿದೆ. ಪಾಲಿಕೆ ರೂಪಿಸುವ ತಂತ್ರಾಂಶದಲ್ಲಿ ನೋಂದಣಿ ಮಾಡದ ನೀರಿನ ಟ್ಯಾಂಕರ್ ತೊಂದರೆಯಾಗಲಿದೆ. ನೀರಿನ ಸಮಸ್ಯೆಯಿರುವ 110 ಹಳ್ಳಿಗಳು ಬರುವ 30 ವಾರ್ಡ್ ವಾರ್ಡ್ ಗಳಲ್ಲಿ ಬೆಂಗಳೂರು ಜಲಮಂಡಳಿ ತಲಾ ಒಬ್ಬ ಎಇ ಹಾಗೂ ಪಾಲಿಕೆಯ ತಲಾ ಒಬ್ಬ ಎಇ ವಾರ್ಡ್ ಎಂಜಿನಿಯರ್‌ಗಳನ್ನು ನಿಯೋಜಿಸಲಿದ್ದೇವೆ ಎಂದು ತಿಳಿಸಿದರು.
ನಿಗದಿಪಡಿಸಿದ್ದಕ್ಕಿಂತ ಹೆಚ್ಚು ದರ ವಿಧಿಸಿದರೆ ಕ್ರಮ:ಜಲಮಂಡಳಿ, ನಗರ ಜಿಲ್ಲಾಧಿಕಾರಿಗಳ ಮೂಲಕ 200 ನೀರಿನ ಟ್ಯಾಂಕರ್ ಪಡೆದುಕೊಳ್ಳುತ್ತಿದ್ದೇವೆ. 100 ನೀರಿನ ಟ್ಯಾಂಕರ್ 110 ಹಳ್ಳಿಗಳಿಗೆ ಹಾಗೂ ಉಳಿದ 100 ನೀರಿನ ಟ್ಯಾಂಕರ್ ಪಾಲಿಕೆಯ ಉಳಿದ ವಾರ್ಡ್ ಗಳಿಗೆ ನೀರು ಪೂರೈಸಲಿವೆ. ಜಲಮಂಡಳಿ ಹಾಗೂ ಬಿಬಿಎಂಪಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಪಡೆದ ಟ್ಯಾಂಕರ್ಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಥವಾ ಇನ್ನಷ್ಟು ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಎಚ್ಚರಿಸಿದರು.