ಕರ್ನಾಟಕ

karnataka

ETV Bharat / state

ವಿಧಾನಸೌಧದ ಪ್ರತಿ ಕಲ್ಲುಗಳೂ ಕಾಂಗ್ರೆಸ್​ ಭ್ರಷ್ಟಾಚಾರದ ಕಥೆ ಹೇಳುತ್ತಿವೆ: ಬೊಮ್ಮಾಯಿ

ಕಾಂಗ್ರೆಸ್ ವಿರುದ್ಧ ಕೆಂಪಣ್ಣ ಮಾಡಿರುವ ​40% ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Former CM Basavaraja Bommai
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Feb 9, 2024, 3:51 PM IST

ಬೊಮ್ಮಾಯಿ ಹಾಗು ಅಶೋಕ್ ಪ್ರತಿಕ್ರಿಯೆ

ದಾವಣಗೆರೆ: "ವಿಧಾನಸೌಧದ ಪ್ರತಿಯೊಂದು ಕಲ್ಲುಗಳು ಕಾಂಗ್ರೆಸ್​ ಸರ್ಕಾರದ ಭ್ರಷ್ಟಾಚಾರದ ಕಥೆ ಹೇಳುತ್ತಿವೆ. ಇವರು ನೊಂದವರು, ಬಡವರು, ಯಾರನ್ನೂ ಬಿಡುತ್ತಿಲ್ಲ. ವರ್ಗಾವಣೆಯಲ್ಲಂತೂ ದೊಡ್ಡ ದಂಧೆ ನಡೆಯುತ್ತಿದೆ. ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಪ್ರತಿಯೊಂದು ಕಚೇರಿಗಳು ಕಲೆಕ್ಷನ್​ ಸೆಂಟರ್​ಗಳಾಗಿವೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಹರಿಹರ ತಾಲೂಕಿನ ವಾಲ್ಮೀಕಿ ಮಠದಲ್ಲಿಂದು ಸರ್ಕಾರದ ವಿರುದ್ಧ ಕೆಂಪಣ್ಣ ಅವರ 40% ಭ್ರಷ್ಟಾಚಾರದ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಅಧಿಕಾರಿಗಳು ಹಣ ಕೇಳ್ತಿದ್ದಾರೆ ಎಂದು ಹೇಳ್ತಿದ್ದಾರೆ. ಅಧಿಕಾರಿಗಳು ಯಾರ ಹೆಸರಲ್ಲಿ ಹಣ ಕೇಳುತ್ತಿದ್ದಾರೆ? ರಾಜಕೀಯವಾಗಿ ಆಶ್ರಯ ಇಲ್ಲದೆ ಅವರು ಹೇಗೆ ಹಣ ಕಲೆಕ್ಟ್​ ಮಾಡುತ್ತಿದ್ದಾರೆ? ಈ ಸರ್ಕಾರದಲ್ಲಿ 40% ಅಲ್ಲ ಅದಕ್ಕೂ ಹೆಚ್ಚಿದೆ. ಈಗ ಎಲ್ಲಾ ಆಫೀಸ್​ಗಳು ಕಲೆಕ್ಷನ್​ ಸೆಂಟರ್​ಗಳಾಗಿವೆ. ಅವೆಲ್ಲವೂ ರಾಜಕೀಯ ನಾಯಕರುಗಳಿಗೆ, ಜನಪ್ರತಿನಿಧಿಗಳಿಗೆ, ಮುಖ್ಯಮಂತ್ರಿ ಕಚೇರಿವರೆಗೆ ತಲುಪಿದೆ. ಈಗ ಎಲ್ಲಿ ಭ್ರಷ್ಟಾಚಾರ ಆಗುತ್ತಿದೆಯೋ ಅಲ್ಲೇ ದೂರು ನೀಡಲು ಹೋಗಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಈ ಬಗ್ಗೆ ಕೂಡಲೇ ತನಿಖೆಯಾಗಬೇಕು" ಎಂದು ಒತ್ತಾಯಿಸಿದರು.

40% ಸರ್ಕಾರದ ವಿರುದ್ಧ ಹೋರಾಟ:"ಕಾಂಗ್ರೆಸ್​ ಸರ್ಕಾರ ಗುತ್ತಿಗೆದಾರರಿಂದ 40% ಹಣವನ್ನು ವಸೂಲಿ ಮಾಡುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಕೆಂಪಣ್ಣ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ದಾಖಲೆಯನ್ನೂ ನೀಡುತ್ತೇನೆ ಎಂದು ನನಗೆ ಕರೆ ಮಾಡಿ ಹೇಳಿದ್ದಾರೆ. ಹಾಗಾಗಿ ನಾವು ಈ ಸರ್ಕಾರದ ವಿರುದ್ಧ ವಿಧಾನಸೌಧದ ಒಳಗೆ ಹಾಗೂ ಹೊರಗೆ ಹೋರಾಟವನ್ನು ಮಾಡುತ್ತೇವೆ" ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಕಾಂಗ್ರೆಸ್​ ಸರ್ಕಾರ ನಿರಂತರವಾಗಿ ಮಂತ್ರಿಗಳು, ಅಧಿಕಾರಿಗಳು, ಹಾಗೂ ಶಾಸಕರ ಹೆಸರುಗಳನ್ನು ಹೇಳಿ ಹಣವನ್ನು ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೆಂಪಣ್ಣ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಐಟಿ ದಾಳಿ ನಡೆದಾಗ ನೂರು ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಲೂಟಿ ಮಾಡುತ್ತಿದೆ. ಇದು ಲೂಟಿಕೋರರ ಸರ್ಕಾರ, ತಕ್ಷಣ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು" ಎಂದು ಆಗ್ರಹಿಸಿದರು.

"ಇದೇ ಕಾಂಗ್ರೆಸ್​ ಸರ್ಕಾರ ಕೆಂಪಣ್ಣ ಅವರನ್ನು ಮುಂದಿಟ್ಟುಕೊಂಡು 40% ಅಂತ ಬೋರ್ಡ್ ಹಾಕಿ ಸಿಎಂ ಬೊಮ್ಮಾಯಿ ವಿರುದ್ಧ ಕ್ಯಾಂಪೇನ್ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರೇ 40% ಅನ್ನುವಂತಾಗಿದೆ. ಇದೀಗ ಇವರು ಏನ್ ಹೇಳ್ತಾರೆ? ಇವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕು. ಕೆಂಪಣ್ಣ ಅವರ ಆರೋಪದ ಮೇಲೆ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು. ಇವರು ನಮ್ಮ ವಿರುದ್ಧ ಆಗ ಹೋರಾಟ ಮಾಡಿದ್ದರು, ನಾವು ಇವರ ವಿರುದ್ಧ ವಿಧಾನಸೌಧದ ಒಳಗಡೆ ಹೊರಗಡೆ ಎರಡು ಕಡೆ ಹೋರಾಟ ಮಾಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಅವರು ದಾಖಲೆ ಕೊಡುತ್ತೇನೆ ಎಂದು ಕರೆ ಮಾಡಿ ಹೇಳಿದ್ದರು. ಅವರಿಗೂ ನಾನು ಸಮಯ ಕೊಡುತ್ತೇನೆ. ಅವರು ಕೊಡುವ ದಾಖಲೆಗಳೆಲ್ಲವನ್ನೂ ವಿಧಾಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ" ಎಂದು ತಿಳಿಸಿದರು.

"ಅಧಿಕಾರಿಗಳನ್ನು ಸರ್ಕಾರ ಲೂಟಿ ಮಾಡಲು ಹಚ್ಚಿ ಬಿಟ್ಟಿದ್ದಾರೆ. ಹಣ ಕೊಡುವವರಷ್ಟೇ ಇರಬೇಕು. ತಿಂಗಳಿಗೆ ಇಷ್ಟು, ವಾರಕ್ಕೆ ಇಷ್ಟು ಅಂತ ಲೂಟಿಗೆ ಹಚ್ಚಿದ್ದಾರೆ. ಹೀಗಾಗಿ ನಿಷ್ಠಾವಂತ ಅಧಿಕಾರಿಗಳು ರಾಜೀನಾಮೆ ನೀಡುತ್ತಾರೆ" ಎಂದು ಪ್ರತಾಪ್ ರೆಡ್ಡಿ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಕಾಂಗ್ರೆಸ್‌ ಸರ್ಕಾರದಲ್ಲೂ ಅಧಿಕಾರಿಗಳು 40% ಕಮಿಷನ್ ಪಡೆಯುವುದು ಮುಂದುವರೆದಿದೆ: ಕೆಂಪಣ್ಣ

ABOUT THE AUTHOR

...view details