ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ:ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, "ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 200 ಸ್ಥಾನಕ್ಕೆ ಸ್ಪರ್ಧಿಸಿ ಸರ್ಕಾರ ಮಾಡುತ್ತೇವೆ ಎನ್ನುತ್ತಾರೆ. ಲೋಕಸಭೆಯ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸುತ್ತಿಲ್ಲ. ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡದೇ ಅವರು ಅಧಿಕಾರಕ್ಕೆ ಹೇಗೆ ಬರುತ್ತಾರೆ?"ಎಂದು ಪ್ರಶ್ನಿಸಿದರು.
"ಡಿಎಂಕೆ ಪ್ರಣಾಳಿಕೆ ಬೇರೆ, ಟಿಎಂಸಿಯದ್ದು ಬೇರೆ, ಇನ್ನು ಆಮ್ ಆದ್ಮಿ ಪಕ್ಷದ್ದು ಬೇರೆ. ಕಾಂಗ್ರೆಸ್ನದ್ದು ಮತ್ತೊಂದು. ಜನರು ಯಾವುದನ್ನು ನಂಬಬೇಕು ಹೇಳಿ. ಜನರಿಗೆ ಅಪ್ಪಟ ಸುಳ್ಳು ಹೇಳಿ ಇಂತಹ ಆಶ್ವಾಸನೆ ಕೊಡುತ್ತಿದ್ದಾರೆ. ಒಂದು ಲಕ್ಷ ಕೊಡುತ್ತೇವೆ, ಎರಡು ಲಕ್ಷ ಕೊಡುತ್ತೇವೆ ಎಂದು ಜನರಿಗೆ ಕಾಂಗ್ರೆಸ್, ಸುಳ್ಳು ಹೇಳಿ ಮೋಸ ಮಾಡುವುದನ್ನು ಬಿಡಬೇಕು. ಕೆಲವು ಸ್ಥಾನಗಳಿಗಷ್ಟೇ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ. ಮೊದಲು 543 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ, ಆಮೇಲೆ ಇಂತಹ ಆಶ್ವಾಸನೆ ಕೊಡಿ" ಎಂದು ಟೀಕಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ: "ರಾಜ್ಯದ ಬರ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಕೇಂದ್ರಕ್ಕೆ ಮನವಿಯನ್ನು ಕಳುಹಿಸುವಾಗ ಕರ್ನಾಟಕದ ವಾಸ್ತವ ಸ್ಥಿತಿಯನ್ನು ಕಳುಹಿಸಿರಲಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಬೊಕ್ಕಸದಿಂದ ರಾಜ್ಯದ ರೈತರಿಗೆ ಹಣ ಬಿಡುಗಡೆ ಮಾಡಲಿ" ಎಂದರು.
ಮುಂದುವರಿದು, "ರಾಜಕೀಯ ಪ್ರೇರಿತ ದೃಷ್ಟಿಯಿಂದ ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಅನುದಾನ ಕಡಿಮೆ ಆಗಲು ಸಿದ್ದರಾಮಯ್ಯ ಅವರು ಕಾರಣ. ಕೇಂದ್ರಕ್ಕೆ ಅವರು ರಾಜ್ಯದ ನೈಜ್ಯಸ್ಥಿತಿಯನ್ನು ಆಗಿನ ಸರ್ಕಾರ ಹೇಳಿಕೊಳ್ಳಲಿಲ್ಲ. ಅದಕ್ಕೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಯುಪಿಎ ಸರ್ಕಾರ ಇದ್ದಾಗ 8-10 ತಿಂಗಳ ನಂತರ ಪರಿಹಾರ ನೀಡಿದ ಉದಾಹರಣೆಯಿದೆ. ಇವರಿಗೆ ರೈತರ ಬಗ್ಗೆ ಕಳಕಳಿ ಇಲ್ಲ. ರೈತ ವಿರೋಧಿ ಸರ್ಕಾರ ಇದಾಗಿದೆ".
ರಾಜ್ಯದ ಬಿಜೆಪಿಯ 25 ಸಂಸದರು ಪುಕ್ಕಲರು ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, "ಒಂದು ವ್ಯವಸ್ಥೆಯೊಳಗೆ ಕೆಲಸ ಮಾಡುವಾಗ ವ್ಯಕ್ತಿಗತ ಪ್ರಶ್ನೆ ಎನ್ನುವುದು ಬರುವುದಿಲ್ಲ. ನರೇಂದ್ರ ಮೋದಿ ಅವರ ಕಾಲದಲ್ಲಿ ಯಾವುದೇ ಲಾಭಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುತ್ತಾರೆ. ಹೀಗಾಗಿ ರಾಜ್ಯಕ್ಕೆ ಕೇಂದ್ರಕ್ಕೆ ಏನು ಸಿಗಬೇಕು ಅದೆಲ್ಲವೂ ಸಿಗುತ್ತದೆ".
"ಕಾಂಗ್ರೆಸ್‌ನವರು ಹೈಕಮಾಂಡ್ ಕಡೆ ಹೋಗಿ ಅರ್ಜಿ ಕೊಡಬೇಕು. ಇದು ಕಾಂಗ್ರೆಸ್‌ನವರ ಸ್ಟೈಲ್. ಇವರ ರೀತಿ ಬಿಜೆಪಿಯವರಾದ ನಾವು ಮಾಡಲು ಬರುವುದಿಲ್ಲ. ಕಾಂಗ್ರೆಸ್‌ನವರಂತೆ ನಾವು ಮೋದಿಯವರ ಮುಂದೆ ಕೈಕಟ್ಟಿ ನಿಲ್ಲುವ ಪ್ರಶ್ನೆಯೇ ಇಲ್ಲ. ನಾವು ಮೋದಿಯವರ ಜೊತೆಗೆ ನಿಲ್ಲುತ್ತೇವೆ. ಅವರನ್ನು ಬೆಂಬಲಿಸುತ್ತೇವೆ" ಎಂದರು.
"60 ವರ್ಷದಲ್ಲಿ ಹೈವೇ ಕೆಲಸ ಮಾಡಲು ಕಾಂಗ್ರೆಸ್‌ನವರಿಂದ ಆಗಿಲ್ಲ. ಆದರೆ, ನಾವು ಈಗಾಗಲೇ ನಾವು 3,500 ಕಿಮೀ ಹೈವೇ ಕೆಲಸ ಮಾಡಿದ್ದೇವೆ. ಬರೀ ಐದು ವರ್ಷದಲ್ಲಿ 3,500 ಕಿ.ಮೀ. ಹೈವೇ ಕೆಲಸವನ್ನು ಮಾಡಿದ್ದೇವೆ. ಇನ್ನೂ ಮೂರು ಸಾವಿರ ಕಿ ಮೀ. ಹೈವೇ ಕೆಲಸದ ಅನುಮೋದನೆ ಆಗಿದೆ. ರೈಲ್ವೆಯಲ್ಲಿಯೂ ಕೂಡ ಕಳೆದ ಬಜೆಟ್ನಲ್ಲಿ 3,500-7,000 ಕಿಮೀ ವರೆಗೆ ಅನುಮೋದನೆ ಆಗಿದೆ. ಇಂತಹ ಕೆಲಸಗಳನ್ನು ನಾವೇನು ಕೇಂದ್ರಕ್ಕೆ ಅರ್ಜಿ ಕೊಟ್ಟು ಮಾಡಿಸಿಲ್ಲ. ಕೇಂದ್ರದ ಬಿಜೆಪಿಯೇ ಅದನ್ನು ಸ್ವಯಂ ಪ್ರೇರಿತವಾಗಿಯೇ ಮಾಡಿದೆ ಎಂದು ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ:ಕಾಂಗ್ರೆಸ್ನಲ್ಲೇ ಬೇರೆ ಬೇರೆ ಕಾಂಗ್ರೆಸ್ಗಳಿವೆ, ಈಗ ಇರೋದು ನಕಲಿ ಕಾಂಗ್ರೆಸ್: ಜೋಶಿ ಟೀಕೆ - Fake Congress