ಬೆಳಗಾವಿ: "ಪಂಚಮಸಾಲಿ ಮೀಸಲಾತಿಗಾಗಿ ಆಗ್ರಹಿಸಿ ಸುವರ್ಣಸೌಧಕ್ಕೆ ನಾವು ಶಾಂತಿಯುತವಾಗಿ ಮುತ್ತಿಗೆ ಹಾಕುತ್ತಿದ್ದ ಸಂದರ್ಭದಲ್ಲಿ ನಮ್ಮ ಮೇಲೆ ಲಾಠಿ ಚಾರ್ಚ್ ಮಾಡಲಾಗಿದೆ. ಇದರ ಪ್ರತೀಕಾರವನ್ನು ನಾವೆಲ್ಲರೂ ಸೇರಿ ಮುಂದಿನ ದಿನಗಳಲ್ಲಿ ತೀರಿಸಿಕೊಳ್ಳುತ್ತೇವೆ" ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪೊಲೀಸ್ ವಶದಿಂದ ಬಂಧನ ಮುಕ್ತರಾಗಿ ಹೊರಬಂದು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಂಚಮಸಾಲಿ ಸಮಾಜದವರು ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೆ ಶ್ರಮಿಕ ವರ್ಗದ ನಮ್ಮ ಸಮಾಜದ ಜನರ ಮೇಲೆ ಹಲ್ಲೆ ಮಾಡಿದ ಕುಖ್ಯಾತಿಗೆ ಸಿದ್ದರಾಮಯ್ಯ ಸರ್ಕಾರ ಪಾತ್ರವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ (ETV Bharat) "ಶಾಂತಿಯುತ ಹೋರಾಟಕ್ಕೂ ಆಸ್ಪದ ನೀಡದ ಎಡಿಜಿಪಿ ನಮ್ಮ ಜನರ ಮೇಲೆ ದೌರ್ಜನ್ಯ ನಡೆಸಲು ಕಾರಣರಾಗಿದ್ದಾರೆ. ಅಮಾಯಕ ಜನರ ಮೇಲೆ ಲಾಠಿ ಚಾರ್ಜ್ ನಡೆಸಿ ಹೋರಾಟವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ಕೂಡಲೇ ಸರ್ಕಾರ ಎಡಿಜಿಪಿ ಹಿತೇಂದ್ರ ಅವರನ್ನು ಅಮಾನತು ಮಾಡಬೇಕು" ಎಂದು ಒತ್ತಾಯಿಸಿದರು.
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಜನರ ಮೇಲೆ ಲಾಠಿ ಚಾರ್ಜ್ ಮಾಡಿಸಿ ತಪ್ಪು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಸಮಾಜದ ಜನರಿಗೆ ತಿಳಿಸಬೇಕು. ಮೀಸಲಾತಿ ನೀಡಿತ್ತೇವೆ ಅಂತ ಹೇಳಲಿ ಅಥವಾ ಇಲ್ಲ ಎಂದು ಹೇಳಲಿ. ಆದರೆ ಈ ರೀತಿಯ ದೌರ್ಜನ್ಯಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ" ಎಂದು ಹೇಳಿದರು.
"ಒಂದು ವೇಳೆ ನಮ್ಮ ಹಕ್ಕನ್ನು ನೀಡುವುದಿಲ್ಲ ಎಂದಾದರೆ ನಾವು ಮುಂದಿನ ದಿನಗಳಲ್ಲಿ ನಮಗೆ ಬೇಕಾದ ಸರ್ಕಾರ ಅಧಿಕಾರಕ್ಕೆ ತಂದು ಮೀಸಲಾತಿ ಪಡೆಯುವ ಶಕ್ತಿ ಸಾಮರ್ಥ್ಯ ಹೊಂದಿದ್ದೇವೆ. ಈ ಹೋರಾಟವನ್ನು ನಾವು ಇಷ್ಟಕ್ಕೆ ಬಿಡುವುದಿಲ್ಲ. ಬರುವ ಗುರುವಾರ ರಾಜ್ಯಾದ್ಯಂತ ಗ್ರಾಮಮಟ್ಟದಲ್ಲಿ ರಸ್ತೆ ಬಂದ್ ಮಾಡಿ ಸರ್ಕಾರದ ವಿರುದ್ಧ ಇನ್ನಷ್ಟು ಹೋರಾಟವನ್ನು ತೀವ್ರಗೊಳಿಸುತ್ತೇವೆ" ಎಂದು ತಿಳಿಸಿದರು.
"ನಮ್ಮ ಸಮಾಜದ ರೈತರು, ಕೂಲಿ ಕಾರ್ಮಿಕರು, ನ್ಯಾಯ ಪಾಲನೆ ಮಾಡುವ ವಕೀಲರು ಸೇರಿದಂತೆ ಮಹಿಳೆಯರ ಮೇಲೂ ಹಲ್ಲೆ ನಡೆಸಿರುವುದು ನಿಜಕ್ಕೂ ನಮಗೆಲ್ಲ ನೋವು ತಂದಿದೆ. ಪ್ರತಿಭಟನೆಯಲ್ಲಿ ನಡೆದ ಲಾಠಿ ಪ್ರಹಾರದಲ್ಲಿ ಗಾಯಗೊಂಡ ಸಮುದಾಯ ಬಾಂಧವರ ವೈದ್ಯಕೀಯ ವೆಚ್ಚವನ್ನು ನಾವೆಲ್ಲರೂ ಸೇರಿ ಭರಿಸುವ ಮೂಲಕ ಅವರನ್ನು ಇನ್ನಷ್ಟು ಹೆಚ್ಚಿನ ಉತ್ಸಾಹದಿಂದ ಮುಂದಿನ ಹೋರಾಟಗಳಲ್ಲಿ ಭಾಗವಹಿಸುವಂತೆ ಮಾಡಲಾಗುತ್ತದೆ" ಎಂದು ಹೇಳಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಪೊಲೀಸರಿಂದ ಲಾಠಿ ಪ್ರಹಾರ, ಹಲವರಿಗೆ ಗಾಯ; ಸ್ವಾಮೀಜಿ, ಯತ್ನಾಳ್ ವಶಕ್ಕೆ