ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಸಂಸದ ಬಿಜೆಪಿ ಪಿ.ಸಿ. ಮೋಹನ್ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖ ಮನ್ಸೂರ್ ಅಲಿ ಖಾನ್ ಬಿಜೆಪಿ ಭದ್ರಕೋಟೆ ಒಡೆಯಲು ಮುಂದಾಗಿದ್ದಾರೆ. ಎರಡೂ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರೊಂದಿಗೆ ಬಿರುಸಿನ ಪ್ರಚಾರದ ಮೂಲಕ ಮತಯಾಚಿಸಿದ್ದಾರೆ. ಇದರ ಪರಿಣಾಮ ಈ ಕ್ಷೇತ್ರ ಟಫ್ ಫೈಟ್ ಅಖಾಡವಾಗಿ ಪರಿವರ್ತನೆಗೊಂಡಿದೆ.
ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್ ಕಸರತ್ತು:ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರವು ಬೆಂಗಳೂರು ನಗರದ ಪ್ರಮುಖ ಕ್ಷೇತ್ರವಾಗಿದ್ದು, ಮಿನಿ ಭಾರತ ಎಂಬ ಹೆಗ್ಗಳಿಕೆ ಪಡೆದಿದೆ. ವಿವಿಧ ಸಮುದಾಯ, ವಿವಿಧ ಭಾಷಿಕರು, ವಲಸಿಗ ಸಮುದಾಯ ಹೊಂದಿರುವ ಕ್ಷೇತ್ರ ಇದಾಗಿದೆ. 2008ರಲ್ಲಿ ರಚಿತವಾದ ಈ ಕ್ಷೇತ್ರ ಸದ್ಯ ಬಿಜೆಪಿಯ ಭದ್ರ ಕೋಟೆಯಾಗಿದೆ. ಪಿ.ಸಿ. ಮೋಹನ್ ಸತತ ಮೂರು ಬಾರಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿ ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೊಸ ಮುಖವಾಗಿದ್ದು, ಶಿಕ್ಷಣ ತಜ್ಞರಾಗಿರುವ ಅವರು ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿನ ಮತದಾರರ ಪ್ರೊಫೈಲ್:ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಒಟ್ಟು 23,89,761 ಮತದಾರರನ್ನು ಹೊಂದಿದೆ. ಅವುಗಳಲ್ಲಿ ಪುರುಷ ಮತದಾರರು 12,34,786, ಮಹಿಳಾ ಮತದಾರರು 11,54,511 ಮತ್ತು ಇತರರು 464 ಇದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 6 ಲಕ್ಷ ಅಲ್ಪಸಂಖ್ಯಾತರು ಇದ್ದಾರೆ. ಸುಮಾರು 4 ಲಕ್ಷ ಮುಸ್ಲಿಂ ಸಮುದಾಯ ಹಾಗೂ ಸರಿಸುಮಾರು 2 ಲಕ್ಷ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಇನ್ನು 6.5 ಲಕ್ಷಕ್ಕೂ ಹೆಚ್ಚು ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರು ಇದ್ದಾರೆ. ಅದರ ಜೊತೆಗೆ ಮಾರವಾಡಿಗಳು ಹಾಗೂ ಗುಜರಾತಿ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸರ್ವಜ್ಞನಗರ, ಗಾಂಧಿನಗರ, ಚಾಮರಾಜಪೇಟೆ, ಶಿವಾಜಿನಗರ, ಶಾಂತಿನಗರ, ರಾಜಾಜಿನಗರ, ಸಿ.ವಿ. ರಾಮನ್ ನಗರ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ. ಕ್ಷೇತ್ರದ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರು ಬಿಜೆಪಿಯತ್ತ ವಾಲುತ್ತಿರುವುದು ಕಂಡು ಬರುತ್ತಿದೆ.
ಇಬ್ಬರೂ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ?:ಬಿಜೆಪಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಮತ ಬ್ಯಾಂಕ್ ಹೊಂದಿರುವ ಪ್ರದೇಶಗಳನ್ನು ಗುರಿಯಾಗಿಸಿ ಇಬ್ಬರು ಅಭ್ಯರ್ಥಿಗಳು ಮತಬೇಟೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತಮಿಳು ನಟ ಶರತ್ ಮೂಲಕ ಕ್ಷೇತ್ರದಲ್ಲಿ ಮತಬೇಟೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸ್ವತಃ ಪ್ರಧಾನಿ ಮೋದಿ ಬಹಿರಂಗ ಸಭೆ ನಡೆಸುವ ಮೂಲಕ ಪಿ.ಸಿ. ಮೋಹನ್ ತಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಸೃಷ್ಟಿಸಲು ಯತ್ನಿಸಿದ್ದಾರೆ.