ಬೆಂಗಳೂರು: ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದು, ಮೃತದೇಹವನ್ನು ಸುಟ್ಟುಹಾಕಲು ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಅಮೃತಸರ ಬಳಿ ಬ್ರಿಜೇಶ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಜನವರಿ 10ರಂದು ಬಾಗಲೂರು ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಗುಣಶೇಖರ (30) ಎಂಬ ರೌಡಿಶೀಟರ್‌ನನ್ನು ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಪತಿ ನಾಪತ್ತೆಯಾಗಿದ್ದಾನೆ ಎಂದು ಗುಣಶೇಖರನ ಪತ್ನಿ ಜೋಸ್ಪಿನ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಂಡಿದ್ದರು. ಬಳಿಕ ತಮಿಳುನಾಡಿನ ಪೆನ್ನಾಗರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಣಶೇಖರನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಭಾರತೀನಗರ ಠಾಣೆಯ ರೌಡಿಶೀಟರ್ ಆಗಿರುವ ಬ್ರಿಜೇಶ್, ಪಂಜಾಬ್‌ನಲ್ಲಿ ನಕಲಿ ಚಿನ್ನ ತಂದು ಅದನ್ನು ಬಾಗಲೂರು ಠಾಣೆಯ ರೌಡಿಶೀಟರ್ ಗುಣಶೇಖರನ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಅದೇ ರೀತಿ ತಂದ ನಕಲಿ ಚಿನ್ನವನ್ನು ಬ್ರಿಜೇಶ್ ಹಾಗೂ ಗುಣಶೇಖರ ಸೇರಿ ಗಣಶೇಖರನ ಸಂಬಂಧಿಯೊಬ್ಬರ ಮೂಲಕ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಕಲಿ ಚಿನ್ನವೆಂದು ತಿಳಿದ ಬಳಿಕ ಫೈನಾನ್ಸ್ ಕಂಪನಿಯವರು ಹಣ ವಾಪಸ್ ಮಾಡಿ, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಗುಣಶೇಖರನ ಸಂಬಂಧಿಗೆ ತಾಕೀತು ಮಾಡಿದ್ದರು ಪೊಲೀಸರು ತಿಳಿಸಿದ್ದಾರೆ.